ADVERTISEMENT

ವಾಣಿಜ್ಯ ವಿಷಯಕ್ಕೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಬಸವನಗುಡಿಯ ಬಿಎಂಎಸ್‌ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಅರ್ಜಿ ಪಡೆದರು –ಪ್ರಜಾವಾಣಿ ಚಿತ್ರ
ಬಸವನಗುಡಿಯ ಬಿಎಂಎಸ್‌ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಅರ್ಜಿ ಪಡೆದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಜಿ ಪಡೆಯಲು ಕಾಲೇಜುಗಳಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಗುರುವಾರ ಸಾಮಾನ್ಯವಾಗಿತ್ತು.

ಪಿಯು ಫಲಿತಾಂಶ ಪ್ರಕಟಗೊಂಡ ಮರುದಿನದಿಂದಲೇ ಅರ್ಜಿ ವಿತರಣೆ ಪ್ರಾರಂಭವಾಗಿದ್ದು, ಈಗಾಗಲೇ ನಗರದ ವಿವಿಧ ಕಾಲೇಜುಗಳಲ್ಲಿ ಸುಮಾರು 7,000 ಪ್ರವೇಶ ಅರ್ಜಿಗಳು ಬಿಕರಿಯಾಗಿವೆ. ಈ ಬಾರಿಯೂ ವಾಣಿಜ್ಯ ವಿಷಯಕ್ಕೆ ಬೇಡಿಕೆ ಹೆಚ್ಚಿದ್ದು, ವಿಜ್ಞಾನ ಮತ್ತು ಕಲಾ ವಿಷಯಗಳು ಆ ನಂತರದ ಸ್ಥಾನಗಳಲ್ಲಿವೆ. ಬಿಬಿಎ, ಬಿಸಿಎ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ದುಕೊಳ್ಳುತ್ತಿದ್ದಾರೆ.

ನ್ಯಾಷನಲ್‌ ಕಾಲೇಜು, ಪಿಇಎಸ್‌ ಕಾಲೇಜು, ವಿಜಯಾ ಕಾಲೇಜು, ಎನ್‌.ಎಂ.ಕೆ.ಆರ್‌.ವಿ. ಕಾಲೇಜು, ಶೇಷಾದ್ರಿಪುರ ಕಾಲೇಜು, ಬಿಎಂಎಸ್‌ ಮಹಿಳಾ ಪದವಿ ಕಾಲೇಜು, ಸುರಾನಾ ಕಾಲೇಜು ಹಾಗೂ ಎಂ.ಇ.ಎಸ್‌. ಕಾಲೇಜುಗಳಲ್ಲಿ ಅರ್ಜಿ ಪಡೆಯುವವರ ಸಂಖ್ಯೆ ತುಸು ಹೆಚ್ಚಿತ್ತು. ಒಂದೊಂದು ಕಾಲೇಜುಗಳಲ್ಲಿ ಒಂದು ರೀತಿಯ ಕಟ್‌ ಆಫ್‌ ಅಂಕ ನಿಗದಿಯಾಗಿದೆ.

ADVERTISEMENT

ಸುರಾನಾ ಪದವಿ ಕಾಲೇಜಿನಲ್ಲಿ ಮೂರು ದಿನಗಳಲ್ಲಿ 1,500ಕ್ಕೂ ಹೆಚ್ಚು ಅರ್ಜಿಗಳು ವಿತರಣೆಯಾಗಿವೆ. ‘ಬಿ.ಕಾಂ, ಬಿಬಿಎ, ಬಿಸಿಎ ವಿಷಯಕ್ಕೆ ಹೆಚ್ಚು ಅರ್ಜಿಗಳನ್ನು ಪಡೆದಿದ್ದಾರೆ. ಪ್ರತಿ ಕೋರ್ಸ್‌ಗೂ 200 ಸೀಟುಗಳಿವೆ’ ಎಂದು ಪ್ರಾಂಶುಪಾಲ ಚಂದ್ರಶೇಖರ್‌ ತಿಳಿಸಿದರು.

ಇನ್ನು ಎಸ್‌ಎಸ್‌ಎಂಆರ್‌ವಿ ಪದವಿ ಕಾಲೇಜಿನಲ್ಲಿ ಇಲ್ಲಿಯವರೆಗೆ 1,020 ಅರ್ಜಿಗಳನ್ನು ನೀಡಿದ್ದಾರೆ. ‘400 ಸೀಟುಗಳಿರುವ ಬಿ.ಕಾಂ. ಪದವಿಗೆ 600 ಅರ್ಜಿಗಳು ವಿತರಣೆಯಾಗಿವೆ. ನಮ್ಮಲ್ಲಿ ಶೇ 75ರಷ್ಟು ಕಟ್‌ ಆಫ್‌ ಅಂಕವಿದೆ’ ಎಂದರು.

ನಗರದ ಪಿಇಎಸ್‌ ಪದವಿ ಕಾಲೇಜಿನಲ್ಲಿ ಮೂರು ದಿನಗಳಲ್ಲಿ 700 ಅರ್ಜಿಗಳು ವಿತರಣೆಯಾಗಿವೆ. ತಾಸುಗಟ್ಟಲೆ ಸಾಲುಗಳಲ್ಲಿ ನಿಲ್ಲಲು ಬಯಸದ ಅನೇಕರು, ‘ಆನ್‌ಲೈನ್‌ ಮೂಲಕ ಅರ್ಜಿ ಪಡೆಯುತ್ತೇವೆ’ ಎಂದು ವಾಪಸಾದರು. ಹಾಗಾಗಿ ನೇರವಾಗಿ ಅರ್ಜಿ ಪಡೆದವರ ಸಂಖ್ಯೆ ಕಡಿಮೆ. ‘ಆನ್‌ಲೈನ್‌ನಲ್ಲಿ ಎಷ್ಟು ಅರ್ಜಿ ಗಳು ಡೌನ್‌ಲೋಡ್‌ ಆಗಿವೆ ಎಂಬ ಮಾಹಿತಿ ಇಲ್ಲ’ ಎಂದು ಪಿಇಎಸ್‌ ಕಾಲೇಜಿನ ಪ್ರಾಂಶುಪಾಲ ಎ.ವಿ. ಚಂದ್ರಶೇಖರ್‌ ತಿಳಿಸಿದರು.

ಚುನಾವಣೆಗಾಗಿ ಅರ್ಜಿ ಸಲ್ಲಿಕೆ ಮುಂದೂಡಿಕೆ

ವಿಜಯ ಪ್ರಥಮ ದರ್ಜೆ ಕಾಲೇಜನ್ನು ಚುನಾವಣಾ ಮಸ್ಟರಿಂಗ್‌ ಕೇಂದ್ರಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಅರ್ಜಿ ವಿತರಣೆಯನ್ನು ಮೇ 13ರವರೆಗೆ ಮುಂದೂಡಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಆನ್‌ಲೈನ್‌ ಮೂಲಕ ಅರ್ಜಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆ ನಂತರ ಅವುಗಳನ್ನು ಸ್ವೀಕರಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ. ಬನ್ನಾಪಾಡ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.