ADVERTISEMENT

ವಾಹನಗಳಿಗೆ ಸಿಲುಕಿ ಹಾಲಾಮೆಗಳು ಅಪ್ಪಚ್ಚಿ..!

ಉಸಿರುಗಟ್ಟಿಸುತ್ತಿರುವ ಕೆರೆಯ ಕೊಳೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಬೆಂಗಳೂರು: ನಗರದ ಉತ್ತರಹಳ್ಳಿ ಬಳಿಯ ಸುಬ್ರಹ್ಮಣ್ಯಪುರ ಕೆರೆಯು ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದ್ದು, ಕೆರೆಯಿಂದ ಹಾಲಾಮೆಗಳು (ಚಪ್ಪಟೆ ಆಮೆ) ಹೊರಬರುತ್ತಿವೆ. ಕೆರೆ ದಂಡೆಯ ರಸ್ತೆ ಕಡೆಗೆ ತೆವಳುತ್ತಾ ಬರುವ ಆಮೆಗಳು ವಾಹನಗಳಿಗೆ ಸಿಕ್ಕು ಸಾಯುವುದು ಇತ್ತೀಚೆಗೆ ಹೆಚ್ಚಾಗಿದೆ.

ಕೆರೆಯಿಂದ ಹೊರಬರುವ ಆಮೆಗಳನ್ನು ಕೆಲ ಸ್ಥಳೀಯರು ಹಿಡಿದು, ಕೊಂದು ಅದರ ಮಾಂಸವನ್ನು ಆಹಾರಕ್ಕಾಗಿ ಬಳಸಿಕೊಳ್ಳುತ್ತಿರುವುದೂ ಕಂಡು ಬರುತ್ತಿದೆ.


ಆಮೆಗಳು ಜೀವಿಸಲು ನೀರಿನಲ್ಲಿ ಸಾಕಷ್ಟು ಆಮ್ಲದ ಪ್ರಮಾಣ ಬೇಕಾಗುತ್ತದೆ. ಸದ್ಯ ಈ ಕೆರೆಯಲ್ಲಿ ಆಮ್ಲದ ಪ್ರಮಾಣ ಕಡಿಮೆಯಾಗಿದೆ. ಕೆರೆಗೆ ಕೊಳಚೆ ನೀರಿನ ಹರಿವು ಹೆಚ್ಚಾಗಿದೆ. ಕೆರೆಯ ನೀರು ಸಂಪೂರ್ಣ ಮಲಿನಗೊಂಡಿದೆ. ಹೀಗಾಗಿ ಆಮೆಗಳು ಕೆರೆಯಿಂದ ಹೊರಬರುತ್ತಿವೆ' ಎಂದು ಆಮೆಗಳನ್ನು ರಕ್ಷಿಸುತ್ತಿರುವ ಸ್ಥಳೀಯರಾದ ಪ್ರಸನ್ನಕುಮಾರ್ ಹೇಳಿದರು.

ADVERTISEMENT

`ದಿನದಿಂದ ದಿನಕ್ಕೆ ಕೆರೆಯೂ ಒತ್ತುವರಿಯಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಳೆಯ ಕಟ್ಟಡಗಳನ್ನು ಕೆಡವಿದ ಮಣ್ಣು ಮತ್ತಿತರ ತ್ಯಾಜ್ಯಗಳನ್ನೂ ತಂದು ಕೆರೆಗೆ ಸುರಿಯಲಾಗುತ್ತಿದೆ. ಇದರಿಂದ ಆಮೆಗಳು ಕೆರೆಯಲ್ಲಿ ಬದುಕಲಾಗದೇ ಹೊರಬರುತ್ತಿವೆ. ಈ ವರೆಗೆ ಸಾಕಷ್ಟು ಆಮೆಗಳನ್ನು ರಕ್ಷಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವನ್ಯಜೀವಿ ವಿಭಾಗಕ್ಕೆ ಒಪ್ಪಿಸಲಾಗಿದೆ' ಎಂದು ಅವರು ತಿಳಿಸಿದರು.

`ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಹಾಲಾಮೆಗಳನ್ನು ಕೊಲ್ಲುವುದು ಅಪರಾಧ. ಹಾಲಾಮೆಗಳು ಹೆಚ್ಚು ರುಚಿಯಾಗಿರುತ್ತವೆ ಎಂಬ ಕಾರಣಕ್ಕೆ ಇವುಗಳನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡುವವರೂ ಇದ್ದಾರೆ' ಜೀವ ವಿಜ್ಞಾನಿ ರಾಮಚಂದ್ರ ತಿಳಿಸಿದರು.


`ಕೆರೆಯನ್ನು ಮಾಲಿನ್ಯ ಮುಕ್ತವಾಗಿಸಬೇಕು ಎಂದು ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ. ಸರ್ಕಾರಕ್ಕೆ ಕೆರೆಗಳ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ, ಕೆರೆಗಳ ನಿರ್ವಹಣೆಯನ್ನು ಸ್ಥಳೀಯ ನಿವಾಸಿಗಳ ಸಂಘಗಳಿಗೆ ವಹಿಸಬೇಕು' ಎಂದು ಸ್ಥಳೀಯರಾದ ಫಣಿಸಾಯಿ ಒತ್ತಾಯಿಸಿದರು.

`ಕೆರೆಯ ಮಾಲಿನ್ಯ ಮತ್ತು ಒತ್ತುವರಿಯನ್ನು ತಡೆಯುವಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ಜಲಮಂಡಲಿ ಸೋತಿವೆ. ಮೂರು ವರ್ಷದಿಂದ ಕೆರೆಯ ಒತ್ತುವರಿ ಹೆಚ್ಚಾಗಿದೆ. ಕೆರೆಯು ಕೊಳಚೆಯ ಸಂಗ್ರಹಾಗಾರವಾಗಿದೆ' ಎಂದು ಉತ್ತರಹಳ್ಳಿಯ ಬಿಬಿಎಂಪಿ ಸದಸ್ಯ ರಮೇಶ್ ರಾಜು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.