ADVERTISEMENT

ವಿದ್ಯಾರ್ಥಿಗಳಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 19:05 IST
Last Updated 11 ಮಾರ್ಚ್ 2011, 19:05 IST

ನೆಲಮಂಗಲ:  ಸ್ಥಳೀಯ ಸೊಂಡೆಕೊಪ್ಪ ವೃತ್ತದ ಬಳಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ನಿಲುಗಡೆಯಾಗದಿರುವುದನ್ನು ಖಂಡಿಸಿ ತುಮಕೂರು, ಕುಣಿಗಲ್ ಕಡೆಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ನಾಗರಿಕರು ಮತ್ತು ನೌಕರರು ಶುಕ್ರವಾರ ಬೆಳಗ್ಗೆ ದಿಢೀರ್ ರಸ್ತೆ ತಡೆ ನಡೆಸಿದರು.

ನೆಲಮಂಗಲದಿಂದ ಬೆಂಗಳೂರಿಗೆ ಸುಗಮ ಸಂಚಾರಕ್ಕಾಗಿ ಎಲಿವೇಟೆಡ್ ಹೈವೇ ನಿರ್ಮಿಸಲಾಗಿದೆ. ಇದು ಟ್ರಾಫಿಕ್ ಜಾಮ್‌ಗಳಿಲ್ಲದೆ ಕೆಲವೇ ನಿಮಿಷಗಳಲ್ಲಿ ಬೆಂಗಳೂರು ತಲುಪಲು ಹೊರಗಿನವರಿಗೆ ವರವಾದರೆ, ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. ಮೇಲ್ಸೇತುವೆ ನಿರ್ಮಾಣದಿಂದ ಎಲ್ಲ ಬಸ್ಸುಗಳು ಸ್ಥಳೀಯರನ್ನು ಲೆಕ್ಕಿಸದೆ ಅನುಕೂಲಕ್ಕಾಗಿರುವ ಸರ್ವೀಸ್ (ಸೇವಾ) ರಸ್ತೆಗೂ ಬರದೆ ಮೇಲ್ಸೇತುವೆಯಲ್ಲಿ ಸಂಚರಿಸುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ವಿಶೇಷವಾಗಿ ತುಮಕೂರಿಗೆ ಸಂಚರಿಸುವ ವಿದ್ಯರ್ಥಿಗಳಂತೂ ವಿಚಿತ್ರ ಹಿಂಸೆಯನ್ನು ಪಡೆುವಂತಾಗಿದೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಪ್ರತಿಭಟನಾಕಾರರು ತಿಳಿಸಿದರು.

ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಅಸ್ತವಸ್ತಸ್ಥಗೊಂಡಿತು.ಸ್ಥಳಕ್ಕೆ ಆಗಮಿಸಿದ ಸಬ್‌ಇನ್‌ಸ್ಪೆಕ್ಟರ್‌ಗಳಾದ ರಂಗಸ್ವಾಮಿ, ಮಾರುತಿ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.