ADVERTISEMENT

ವಿದ್ಯುತ್ ಪ್ರವಹಿಸಿ ವಿದೇಶಿ ಪ್ರಜೆ ಸಾವು

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ಬೆಂಗಳೂರು: ವಿದ್ಯುತ್ ಪ್ರವಹಿಸಿ ಮಾಲ್ಡೀವ್ಸ್ ಪ್ರಜೆಯೊಬ್ಬರು ಮೃತಪಟ್ಟಿರುವ ಘಟನೆ ನಾಗರಬಾವಿಯಲ್ಲಿ ಗುರುವಾರ ನಡೆದಿದೆ.

ಅಹಮ್ಮದ್ ಶತೀರ್ (26) ಮೃತಪಟ್ಟವರು. ಮಾಲ್ಡೀವ್ಸ್‌ನ ಪೊಲೀಸ್ ಇಲಾಖೆಯಲ್ಲಿ (ಕಾನ್‌ಸ್ಟೇಬಲ್ ದರ್ಜೆ) ಕೆಲಸ ಮಾಡುತ್ತಿದ್ದ ಅವರು ಪತ್ನಿ ರಮೇಜ್ ಆಲಿಯವರೊಂದಿಗೆ ನಾಗರಬಾವಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪತ್ನಿ ಅಲ್ಲಿನ ಪದ್ಮಶ್ರೀ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆಂದು ಪೊಲೀಸ್‌ರು ತಿಳಿಸಿದ್ದಾರೆ.

ಜ.4ರಂದು ನಗರಕ್ಕೆ ಬಂದಿದ್ದ, ಅಹಮದ್ ಗುರುವಾರ ಮಧ್ಯಾಹ್ನ ಎರಡನೇ ಮಹಡಿಯಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಅವರು ಹೈ ಟೆನ್ಷನ್ ತಂತಿ ಮುಟ್ಟಿದ್ದಾರೆ. ವಿದ್ಯುತ್ ಪ್ರವಹಿಸಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ರಾತ್ರಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

`ಶಾಂತಮ್ಮ ಎಂಬುವರ ಮನೆಯಲ್ಲಿ ರಮೇಜ್ ಆಲಿ ಬಾಡಿಗೆಗೆ ವಾಸವಿದ್ದರು. ಪ್ರಕರಣದಲ್ಲಿ ಮನೆಯ ಮಾಲೀಕರ ನಿರ್ಲಕ್ಷ್ಯ ಇರುವುದು ಗೊತ್ತಾದರೆ ಪ್ರಕರಣ ದಾಖಲಿಸಲಾಗುತ್ತದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.