ಬೆಂಗಳೂರು: ‘ದೇಶದ ವಿಶ್ವವಿದ್ಯಾಲಯಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುತ್ತಿಲ್ಲ. ವಿವಿಗಳಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡುತ್ತಿಲ್ಲ’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬೇಸರ ವ್ಯಕ್ತಪಡಿಸಿದರು.
ಜಯನಗರ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ‘ವಿಮೆನ್ಸ್ ಪೀಸ್ ಲೀಗ್’ ನ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.‘ಅಮೆರಿಕ ಮತ್ತಿತರ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಉತ್ತೇನ ನೀಡಲಾಗುತ್ತಿದೆ. ಹೀಗಾಗಿ ಆ ರಾಷ್ಟ್ರಗಳು ತ್ವರಿತಗತಿಯಲ್ಲಿ ಅಭಿವೃದ್ಧಿ
ಸಾಧಿಸುತ್ತಿವೆ’ ಎಂದು ಅವರುಅಭಿಪ್ರಾಯಪಟ್ಟರು.
‘2007ರಲ್ಲೇ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದೆ. ಆದರೆ, ಈ ಮಸೂದೆಗೆ ಈ ವರೆಗೆ ಒಪ್ಪಿಗೆ ಸಿಕ್ಕಿಲ್ಲ. ಪೂರ್ವಗ್ರಹಪೀಡಿತ ಮನೋಭಾವದ ಕಾರಣದಿಂದ ಒಪ್ಪಿಗೆ ಸಿಗುವುದು ವಿಳಂಬ ಆಗುತ್ತಿದೆ. ಮಹಿಳೆಯರು ಸಂಸತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಕಲಾಪ ಸುಗಮವಾಗಿ ಸಾಗುತ್ತದೆ’ ಎಂದು ಅವರು ತಿಳಿಸಿದರು.
ನಿವೃತ್ತ ನ್ಯಾಯಮೂರ್ತಿ ವಿ.ಜಗನ್ನಾಥ್, ‘ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಮೂಡಿಸುವ ಶಿಕ್ಷಣ ನೀಡಬೇಕು’ ಎಂದರು.
ಸಂಸ್ಥೆಯ ಅಧ್ಯಕ್ಷೆ ವಿಶಾಲಾಕ್ಷಿ ಎಸ್.ರಾವ್ ಅಧ್ಯಕ್ಷತೆ ವಹಿಸಿ, ‘ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಸಂಸ್ಥೆಯ ಗುರಿ’ ಎಂದರು. ಇದೇ ಸಂದರ್ಭದಲ್ಲಿ ಪ್ರಫುಲ್ಲತಾ ಭಾರದ್ವಾಜ್ ಅವರು ಸಂಸ್ಥೆಯ ಸ್ಮರಣ ಸಂಚಿಕೆ ‘ನೈದಿಲೆ’ಯನ್ನು ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.