ADVERTISEMENT

ವೃತ್ತಿಪರರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ–ಹೈಕೋರ್ಟ್‌

ಲೆಕ್ಕ ಪರಿಶೋಧಕ ಎನ್‌.ಎನ್‌. ಖಿಂಚಾ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:49 IST
Last Updated 15 ಅಕ್ಟೋಬರ್ 2017, 19:49 IST

ಬೆಂಗಳೂರು: ಯಾವುದೇ ವೃತ್ತಿಪರರು ಸರ್ಕಾರಿ ನೌಕರರ ಜೊತೆ ಕೈಜೋಡಿಸಿ ಹಣ ವಸೂಲಿ ಮಾಡಿದರೆ ಅಂತಹವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಒಳಪಡಿಸಿ, ಶಿಕ್ಷೆ ವಿಧಿಸಲು ಅವಕಾಶ ಇದೆ.

ರಾಜ್ಯದ ಪ್ರಭಾವಿ ಲೆಕ್ಕ ಪರಿಶೋಧಕರೊಬ್ಬರ ವಿರುದ್ಧದ ಸಿಬಿಐ ತನಿಖೆ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌ ಇಂತಹ ಮಹತ್ವದ ಆದೇಶವೊಂದನ್ನು ನೀಡಿದೆ.

‘ಲಂಚ ಪಡೆದಿದ್ದೇನೆ ಎಂಬ ಆರೋಪದಡಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದಿಂದ ನನ್ನನ್ನು ಮುಕ್ತಗೊಳಿಸಬೇಕು’ ಎಂದು ಕೋರಿ ನಗರದ ಶಂಕರಪುರಂ ನಿವಾಸಿ ಲೆಕ್ಕಪರಿಶೋಧಕ ಎಚ್‌.ನಗೀನ್‌ಚಂದ್ ಖಿಂಚಾ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಜಾ ಮಾಡಿದೆ.

ADVERTISEMENT

‘ಲೆಕ್ಕ ಪರಿಶೋಧಕರೂ ಸೇರಿದಂತೆ ಯಾವುದೇ ವೃತ್ತಿಪರರು, ಸರ್ಕಾರಿ ನೌಕರರ ಜೊತೆ ಕೈ ಜೋಡಿಸಿದರೆ ಅಥವಾ ಸರ್ಕಾರಿ ನೌಕರರ ಮೇಲೆ ಪ್ರಭಾವ ಬೀರಿ ಏನಾದರೂ ಅನುಕೂಲ ಮಾಡಿಸಿಕೊಡುತ್ತೇನೆ ಎಂದು ಸಾರ್ವಜನಿಕರಿಂದ ಹಣ ವಸೂಲಿ ಮಾಡಿದರೆ ಅದು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದೂ  ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?:
‘ಕಟ್ಟಬೇಕಿರುವ ಆದಾಯ ತೆರಿಗೆ ಮೊತ್ತವನ್ನು ಕಡಿಮೆ ಮಾಡಿಸಿಕೊಡುತ್ತೇನೆ’ ಎಂಬ ಭರವಸೆ ನೀಡಿ ತೆರಿಗೆ ಅಧಿಕಾರಿ ಪರವಾಗಿ ಉದ್ಯಮಿಯೊಬ್ಬರಿಂದ ₹ 5 ಲಕ್ಷ ಲಂಚ ಪಡೆದಿದ್ದಾರೆ’ ಎಂಬ ಆರೋಪವನ್ನು ಖಿಂಚಾ ಎದುರಿಸುತ್ತಿದ್ದಾರೆ.

ಜೆ.ಪಿ.ನಗರದಲ್ಲಿ ವಾಸವಿದ್ದ ಕೇರಳದ ಎ.ಕೆ.ಹಲೀಂ ಎಂಬುವರಿಗೆ ಬೆಂಗಳೂರು ವಿಭಾಗದ ಆದಾಯ ತೆರಿಗೆ ನಿರೀಕ್ಷಕ ನಾಗರಾಜ ಅವರು 2011ರಲ್ಲಿ ನೋಟಿಸ್‌ ನೀಡಿದ್ದರು. ‘ನಾವೀಗ ನಿಮ್ಮ ಪಾವತಿಯ ಹಳೆಯ ಕಡತ ಕೆದಕಿದ್ದೇವೆ. ಇದರಲ್ಲಿ 2006ರ ನಂತರದ ನಿಮ್ಮ ಆದಾಯ ತೆರಿಗೆ ₹ 80 ಲಕ್ಷ ಬಾಕಿ ಇರುವುದು ಕಂಡು ಬಂದಿದೆ’ ಎಂದು ನೋಟಿಸ್ ನೀಡಿದ್ದರು.

ನೋಟಿಸ್ ನೀಡಿದ ನಂತರ ಹಲೀಂ ಅವರಿಗೆ ನಾಗರಾಜ, ‘ಬಾಕಿ ತೆರಿಗೆಯನ್ನು ಆರು ತಿಂಗಳಿನಲ್ಲಿ ಕಟ್ಟದಿದ್ದರೆ ಭಾರಿ ದಂಡ ಪಾವತಿಸಬೇಕಾಗುತ್ತದೆ. ಯೋಚಿಸಿ ನೋಡು. ನೀನು ಕಟ್ಟಬೇಕಿರುವ ತೆರಿಗೆ ಕಡಿಮೆ ಮಾಡಿ ಕೊಡುತ್ತೇವೆ. ಇದಕ್ಕಾಗಿ ನೀನು ನಮಗೆ ₹ 20 ಲಕ್ಷ ಕೊಟ್ಟರೆ ಸಾಕು. ಈ ಹಣವನ್ನು ನಗದು ರೂಪದಲ್ಲಿ ಖಿಂಚಾ ಅವರಿಗೆ ತಲುಪಿಸು’ ಎಂದು ಸೂಚಿಸಿದ್ದರು.

ಈ ಕುರಿತು ಹಲೀಂ ಸಿಬಿಐಗೆ ದೂರು ಸಲ್ಲಿಸಿದ್ದರು. ಸಿಬಿಐ ಸೂಚನೆ ಮೇರೆಗೆ, ಸಾರ್ವತ್ರಿಕ ರಜಾ ದಿನದ ವೇಳೆ ಖಿಂಚಾ ಅವರ ಕಚೇರಿಗೆ ಹೋಗಿದ್ದ ಹಲೀಂ ₹ 5 ಲಕ್ಷ ನೀಡಿದ್ದರು. ಈ ವೇಳೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಹಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

ಹೈಕೋರ್ಟ್‌ಗೆ ಪ್ರಕರಣ:
‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 7 ಮತ್ತು 8 ಕೇವಲ ಸರ್ಕಾರಿ ನೌಕರರಿಗೆ ಅನ್ವಯ ಆಗುತ್ತದೆ’ ಎಂದು ಖಿಂಚಾ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಿಐ ವಕೀಲ ಪಿ.ಪ್ರಸನ್ನ ಕುಮಾರ್‌, ‘ಬೋಗಸ್‌ ದಾಖಲೆ ಸೃಷ್ಟಿಸಿರುವ ನಾಗರಾಜ ಮತ್ತು ಖಿಂಚಾ ಸಾರ್ವಜನಿಕರಿಗೆ ಮೋಸ ಮಾಡಿ ಲಂಚ ಪಡೆದಿದ್ದಾರೆ. ಇದೊಂದು ಅಪರೂಪದ ಪ್ರಕರಣ’ ಎಂದು ವಿವರಿಸಿದ್ದರು.

‘ಪ್ರಕರಣದ ಎರಡನೇ ಆರೋಪಿಯಾಗಿರುವ ಖಿಂಚಾ ರಾಜ್ಯದ ಅತ್ಯಂತ ಪ್ರಭಾವಿ ಲೆಕ್ಕ ಪರಿಶೋಧಕ. 2012ರ ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ’ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು.

‘ಆರೋಪಿಗಳು ಯಾವುದೇ ಹಳೆಯ ಕಡತ ಕೆದಕಿಲ್ಲ ಎಂಬುದು ತನಿಖೆಯ ವೇಳೆ ಸಿಬಿಐಗೆ ಕಂಡು ಬಂದಿದೆ. ಇವರಿಬ್ಬರು ಸೇರಿ ಭ್ರಷ್ಟಾಚಾರ ಎಸಗಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಖಿಂಚಾ ಕೋರಿಕೆಯನ್ನು ಮಾನ್ಯ ಮಾಡಬಾರದು’ ಎಂದು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.