ADVERTISEMENT

ಶರ್ಮಾ ನಡೆಗೆ ಟೀಕೆ– ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:38 IST
Last Updated 12 ಮಾರ್ಚ್ 2018, 19:38 IST

ಬೆಂಗಳೂರು: ಐಪಿಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್‌.ಪಿ. ಶರ್ಮಾ ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವು ಅಧಿಕಾರಿಗಳು ಶರ್ಮಾ ನಡೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು, ‘ಐಪಿಎಸ್‌ ಅಧಿಕಾರಿಗಳು ಮುಕ್ತ ತನಿಖೆ ನಡೆಸುವಂತಹ ಪರಿಸ್ಥಿತಿ ಈಗ ಇಲ್ಲ. ಅವರನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ. ಪೊಲೀಸ್‌ ಇಲಾಖೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಉಳಿದಿಲ್ಲ.

ADVERTISEMENT

ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಅಧಿಕಾರಿಗಳನ್ನು ಶಿಕ್ಷಿಸಲಾಗುತ್ತಿದೆ ಎಂಬ ವಾಸ್ತವಾಂಶಗಳನ್ನೇ ಶರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರಕ್ಕೆ ಇದನ್ನು ಹೇಳುವ ಎದೆಗಾರಿಕೆಯನ್ನು ಯಾರೂ ಹೊಂದಿಲ್ಲ. ಆದರೆ, ಅವರು ಇಂತಹ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಇಂತಹ ಪರಿಸ್ಥಿತಿ ಎದುರಿಸಿರುವ ಅಧಿಕಾರಿಗಳು ಖಂಡಿತಾ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಐಪಿಎಸ್‌ ಅಧಿಕಾರಿಗಳ ಪರ ಯಾರೂ ನಿಲ್ಲುತ್ತಿರಲಿಲ್ಲ. ಆದರೆ, ಶರ್ಮಾ ಅದನ್ನು ಸಾಧಿಸಿದ್ದಾರೆ. ಅವರ ಈ ಕ್ರಮಕ್ಕೆ ನಾವು ಮೆಚ್ಚುಗೆ ಸೂಚಿಸಬೇಕು’ ಎಂದರು.

ಎಡಿಜಿಪಿ ದರ್ಜೆಯ ಇನ್ನೊಬ್ಬ ಅಧಿಕಾರಿ, ‘ಶರ್ಮಾ ವೈಯಕ್ತಿಕ ವಿಚಾರಗಳನ್ನೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂಘದ ಲೆಟರ್‌ಹೆಡ್‌ ದುರ್ಬಳಕೆ ಮಾಡಿಕೊಂಡಿದ್ದಾರೆ. ಸದಸ್ಯರ ಗಮನಕ್ಕೆ ತಾರದೆ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಕ್ಕೆ ಅವಕಾಶ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಇದೊಂದು ಮೂರ್ಖತನದಿಂದ ಕೂಡಿದ ಪತ್ರ. ವೈಯಕ್ತಿಕ ಅಭಿಪ್ರಾಯ ಹೇಳಿಕೊಳ್ಳಲು ಸಂಘದ ಹೆಸರನ್ನು ದುರ್ಬಳಕೆ ಮಾಡುವ ಅಧಿಕಾರ ಅವರಿಗಿಲ್ಲ. ಅವರು ನಿಜವಾಗಿಯೂ ಹೀರೋ ಆಗಲು ಬಯಸುತ್ತಾರಾದರೆ, ತಮ್ಮ ಹೆಸರಿನಲ್ಲೇ ಪತ್ರ ಬರೆಯಬೇಕಿತ್ತು. ಸಂಘದ ಹೆಸರಿಗೆ ಏಕೆ ಧಕ್ಕೆ ಉಂಟು ಮಾಡಬೇಕಿತ್ತು’ ಎಂದು ಅವರು ಪ್ರಶ್ನಿಸಿದರು.

ಸಂಘದ ಅಧ್ಯಕ್ಷರ ನೇಮಕಕ್ಕೆ ಮತದಾನ ನಡೆಸುವ ವ್ಯವಸ್ಥೆ ಇಲ್ಲ. ಆಯ್ದ ಕೆಲವು ಹಿರಿಯ ಅಧಿಕಾರಿಗಳು ಪದಾಧಿಕಾರಿಗಳ ಹೆಸರನ್ನು ಸೂಚಿಸುತ್ತಾರೆ. ಅಲ್ಲೂ ಕೂಡಾ ಮತದಾನಕ್ಕೆ ಅವಕಾಶವಿಲ್ಲ. ಎರಡು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವ ಶರ್ಮಾ ಐಪಿಎಸ್‌ ಅಧಿಕಾರಿಗಳ ಸಭೆಯನ್ನು ಒಮ್ಮೆಯೂ ಕರೆದಿಲ್ಲ. ಈ ವರ್ಷ ಸಭೆ ಕರೆಯಲು ಮುಂದಾಗಿದ್ದರು. ಸಾಕಷ್ಟು ಸಮಯ ಸಿಗದ ಕಾರಣ ಆ ಸಭೆಯೂ ನಡೆದಿಲ್ಲ ಎಂದು ಇನ್ನೊಬ್ಬ ಹಿರಿಯ ಅಧಿಕಾರಿ ತಿಳಿಸಿದರು.

ಗೃಹರಕ್ಷಕ ದಳದ ಐಜಿಪಿ ರೂಪಾ, ‘ಅಧ್ಯಕ್ಷರು ಪತ್ರ ಬರೆದಿರುವ ವಿಚಾರ ನಾನೂ ಸೇರಿದಂತೆ ಸಂಘದಲ್ಲಿರುವ ಬಹುತೇಕ ಅಧಿಕಾರಿಗಳಿಗೆ ತಿಳಿದೇ ಇಲ್ಲ. ಹಾಗಾಗಿ ಈ ಪತ್ರಕ್ಕೂ ನಮಗೂ ಸಂಬಂಧವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.