ADVERTISEMENT

ಶಾಸಕ ಬೇಗ್ ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 18:30 IST
Last Updated 13 ಜುಲೈ 2012, 18:30 IST

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಹೊತ್ತ ಕಾಂಗ್ರೆಸ್ ಶಾಸಕ ಆರ್.ರೋಷನ್ ಬೇಗ್ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶಿಸಿದೆ.

ತನಿಖಾ ವರದಿಯನ್ನು ಆಗಸ್ಟ್ 17ರ ಒಳಗೆ ನೀಡುವಂತೆ ನ್ಯಾಯಾಧೀಶ  ಎನ್.ಕೆ.ಸುಧೀಂದ್ರ ರಾವ್ ಆದೇಶಿಸಿದ್ದಾರೆ. ಬೇಗ್ ಅವರ ವಿರುದ್ಧ ಶಿವಾಜಿನಗರ ನಿವಾಸಿ ಎಸ್.ಅಬ್ದುಲ್ ಹಖ್ ಎಂಬುವರು ಸಲ್ಲಿಸಿರುವ ದೂರು ಇದಾಗಿದೆ.

`ಬೇಗ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಆಸ್ತಿಯ ಕುರಿತು ಲೋಕಾಯುಕ್ತರು ಹಾಗೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಲೋಕಾಯುಕ್ತರಿಗೆ ಸಲ್ಲಿಸಿರುವ ಆಸ್ತಿ ವಿವರ ಮತ್ತು ಬೇಗ್ ಹೊಂದಿರುವ ಆಸ್ತಿಯ ಮೌಲ್ಯದ ನಡುವೆ 100 ಕೋಟಿ ರೂಪಾಯಿಗೂ ಹೆಚ್ಚು ವ್ಯತ್ಯಾಸವಿದೆ~ ಎಂದು ಹಖ್ ಆರೋಪಿಸಿದ್ದಾರೆ.

`ಬೇಗೂರಿನಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಉದ್ಯಮ ಸ್ಥಾಪಿಸುವುದಾಗಿ 19.47 ಲಕ್ಷ ರೂಪಾಯಿ ಪಾವತಿಸಿ ಭೂಮಿ ಖರೀದಿಸಿದ್ದರು. ಆದರೆ, ಅಲ್ಲಿ ಯಾವುದೇ ಉದ್ಯಮ ಸ್ಥಾಪಿಸಲಿಲ್ಲ. ಬಳಿಕ ಅಲ್ಲಿ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಜೊತೆ ಜಂಟಿ ಸಹಭಾಗಿತ್ವದಲ್ಲಿ ಒಂದು ಲಕ್ಷ ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಕಟ್ಟಡ ನಿರ್ಮಿಸಿದರು.

ಈ ಕಟ್ಟಡದ ಮೌಲ್ಯ ರೂ 60 ಕೋಟಿಗೂ ಹೆಚ್ಚು. ಅದನ್ನು ಬಹುರಾಷ್ಟ್ರೀಯ ಕಂಪೆನಿಯೊಂದಕ್ಕೆ ಬಾಡಿಗೆಗೆ ನೀಡಿದ್ದು, ವಾರ್ಷಿಕ 2.5 ಕೋಟಿ ರೂಪಾಯಿಗೂ ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ~ ಎಂದು ದೂರಲಾಗಿದೆ. ಬೇಗ್ ಅವರ ಪತ್ನಿ ಸಬೀಹಾ ರೋಷನ್, ಪುತ್ರ ರುಮಾನ್ ಬೇಗ್ ರೆಹ್ಮಾನ್ ಅವರನ್ನೂ ಆರೋಪಿಯಾಗಿಸಲಾಗಿದೆ. ಇವರ ವಿರುದ್ಧವೂ ತನಿಖೆಗೆ ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.