ADVERTISEMENT

ಶಾಸಕ ಶ್ರೀನಿವಾಸ್ ವಿರುದ್ಧ ಎಫ್‌ಐಆರ್

ಸರ್ಕಾರಕ್ಕೆ ವಂಚಿಸಿ 5 ಎಕರೆ ಭೂಮಿ ಲಪಟಾಯಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:43 IST
Last Updated 25 ಏಪ್ರಿಲ್ 2013, 19:43 IST

ಬೆಂಗಳೂರು: ಉತ್ತರಹಳ್ಳಿ ಹೋಬಳಿ ಕಗ್ಗಲಿಪುರ ಗ್ರಾಮದಲ್ಲಿ ಭೂರಹಿತ ಕೃಷಿಕರಿಗೆ ಮೀಸಲಿಡಲಾಗಿದ್ದ ಐದು ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ಆರೋಪದ ಮೇಲೆ ರಾಜರಾಜೇಶ್ವರಿನಗರದ ಶಾಸಕ ಎಂ. ಶ್ರೀನಿವಾಸ್ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪ್ರಕರಣ ದಾಖಲಿಸಿಕೊಂಡು, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಿದ್ಧಪಡಿಸಿದೆ.

ಸುಂಕದಕಟ್ಟೆಯ ಸಿ. ಆನಂದ್ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬಿಎಂಟಿಎಫ್ ಕಂದಾಯ ಅಧಿಕಾರಿ ಉಷಾದೇವಿ ಪ್ರಕರಣದ ಕುರಿತಂತೆ ಎಫ್‌ಐಆರ್ ದಾಖಲಿಸಿದ್ದಾರೆ. ಶ್ರೀನಿವಾಸ್ ಅವರಲ್ಲದೆ ಐಎಎಸ್ ಅಧಿಕಾರಿ ಎಸ್.ಕೆ.ಪ್ರಭಾಕರ್, ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಗೀತಾ ರಮೇಶ್‌ಅವರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎಂ.ಶಾಮಣ್ಣ, ಎಚ್.ಎಂ.ಹನುಮಂತರಾಜು, ಚಂದ್ರಪ್ಪ, ಚಿಕ್ಕಮುನಿಯಪ್ಪ ಮತ್ತು ಆರ್. ಪಾಪಣ್ಣ ಎಂಬುವವರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಬಿಜೆಪಿಯಿಂದ ಮರು ಆಯ್ಕೆ ಬಯಸಿ ಮತ್ತೆ ಸ್ಪರ್ಧೆಯಲ್ಲಿ ಇರುವ ಶ್ರೀನಿವಾಸ್, ಬಗರ್ ಹುಕುಂ ಅಧ್ಯಕ್ಷರಾಗಿದ್ದಾಗ ತಮ್ಮ ಬೆಂಬಲಿಗರಿಗೇ ಭೂಮಿ ಮಂಜೂರು ಮಾಡಿ, ಬಳಿಕ ಅವರ ಬೆಂಬಲಿಗರಿಂದ ಭೂಮಿಯನ್ನು ತಮ್ಮ ಮಗನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಅದಕ್ಕೆ ಆಗಿನ ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಅವರ ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

`ಬಗರ್ ಹುಕುಂ ಮೂಲಕ ಮಂಜೂರಾದ ಭೂಮಿಯನ್ನು 15 ವರ್ಷಗಳ ಕಾಲ ಪರಭಾರೆ ಮಾಡಬಾರದು ಎಂಬ ನಿಯಮ ಇದ್ದರೂ ಕಂದಾಯ ಇಲಾಖೆ ಶ್ರೀನಿವಾಸ್ ಅವರ ಮಗನ ಹೆಸರಿಗೆ ಭೂಮಿ ನೋಂದಣಿ ಮಾಡುವಾಗ ಎಲ್ಲ ನಿಯಮಾವಳಿ ಗಾಳಿಗೆ ತೂರಿದೆ' ಎಂದು ವಿವರಿಸಲಾಗಿದೆ.

`ಉತ್ತರಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಶ್ರೀನಿವಾಸ್ 1984ರ ಅಕ್ಟೋಬರ್ 24ರಂದು ತಮ್ಮ ಬೆಂಬಲಿಗರಾದ ರಸೂಲ್ ಖಾನ್ ಮತ್ತು ಅನೀಸ್ ಖಾನ್ ಅವರಿಗೆ ತಲಾ ಎರಡು ಎಕರೆ ಹಾಗೂ ಸಂಜೀವ್ ರೆಡ್ಡಿ ಅವರಿಗೆ ಒಂದು ಎಕರೆ ಜಮೀನು ಮಂಜೂರು (ಎಲ್‌ಎನ್‌ಡಿ (3)/ಎಸ್‌ಆರ್ 188/84-85) ಮಾಡಿಸಿದ್ದರು. ಅದನ್ನು 1995ರ ಜನವರಿ 13ರಂದು ಶ್ರೀನಿವಾಸ್ ಖರೀದಿ ಮಾಡಿದ್ದರು' ಎಂದು ಮಾಹಿತಿ ನೀಡಲಾಗಿದೆ.

`ಈ ಅಕ್ರಮ ಕ್ರಯ ಖಾತೆ ಬದಲಾವಣೆ ಆದೇಶವನ್ನು ರದ್ದುಗೊಳಿಸಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಕಂದಾಯ ಅಧಿಕಾರಿಗಳು 1997ರ ಜನವರಿ 31ರಂದು ಆದೇಶ (ಆರ್‌ಆರ್‌ಟಿ/ಸಿಆರ್/452/95-96) ಹೊರಡಿಸಿದ್ದರು' ಎಂದು ಮಾಹಿತಿ ನೀಡಲಾಗಿದೆ.

`ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿದ್ದ ಬೆಂಗಳೂರು ಜಿಲ್ಲೆ ವಿಶೇಷ ಜಿಲ್ಲಾಧಿಕಾರಿಗಳು, ಅರ್ಜಿದಾರರು ರೈತಾಪಿ ವರ್ಗಕ್ಕೆ ಸೇರಿದ್ದು, ಕೈಸಾಲದಿಂದ ಜಮೀನು ಅಭಿವೃದ್ಧಿಪಡಿಸಿ, ತೆಂಗಿನ ಮರಗಳು ಮತ್ತು ಸಪೋಟ ಬೆಳೆಸಿದ್ದಾರೆ. ಷರತ್ತಿನ ಅವಧಿಯೊಳಗೆ ಜಮೀನು ಕ್ರಯವಾಗಿದ್ದರೂ ಕಳೆದ 14 ವರ್ಷಗಳಿಂದ ಭೂಸ್ವಾಧೀನ ಹೊಂದಿದ್ದರಿಂದ ಭೂ ಮಂಜೂರಾತಿ ನಿಯಮ1969ರ ನಿಯಮ 27ರ ಅಡಿಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಭೂಮಿ ಮಂಜೂರು ಮಾಡಬೇಕು ಎಂದು 2009ರ ಮಾರ್ಚ್ 3ರಂದು ಕಂದಾಯ ಅಧಿಕಾರಿಗಳಿಗೆ ತಮ್ಮ ಅಭಿಪ್ರಾಯ ಬರೆದಿದ್ದರು' ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಂದಾಯ ಇಲಾಖೆ ಉಪ ಕಾರ್ಯದರ್ಶಿಯಾಗಿದ್ದ ಗೀತಾ ರಮೇಶ್, 2010ರ ಮಾರ್ಚ್ 22ರಂದು ಬರೆದ ಟಿಪ್ಪಣಿಯಲ್ಲಿ ಅರ್ಜಿದಾರರಿಗೆ ಭೂಮಿವಾಪಸು ಕೊಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಸರ್ಕಾರದ ಕಂದಾಯ ಕಾರ್ಯದರ್ಶಿಗಳು ಈ ಭೂಮಿ ಮಂಜೂರು ಅನುಮೋದಿಸಬಹುದು ಎಂಬ ವರದಿ ನೀಡಿದ ಆಧಾರದ ಮೇಲೆ ಸಚಿವ ಕರುಣಾಕರ ರೆಡ್ಡಿ ಅನುಮೋದನೆ ನೀಡಿದ್ದರು' ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.