ADVERTISEMENT

ಶಿಕ್ಷಕರಿಗೆ ಇಂಗ್ಲಿಷ್ ಕೌಶಲ ಬೋಧನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 20:10 IST
Last Updated 3 ಜುಲೈ 2013, 20:10 IST

ಬೆಂಗಳೂರು: ಬ್ರಿಟಿಷ್ ಕೌನ್ಸಿಲ್‌ನ ಸಹಯೋಗದೊಂದಿಗೆ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ಕಲಿಕೆಯ ಕೌಶಲಗಳನ್ನು ಬೋಧಿಸುವ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬ್ರಿಟಿಷ್ ಕೌನ್ಸಿಲ್‌ನ ದಕ್ಷಿಣ ಭಾರತ ವಿಭಾಗದ ನಿರ್ದೇಶಕ ಪಾಲ್ ಸೆಲ್ಲರ್ ಮತ್ತು ಸರ್ವ ಶಿಕ್ಷಾ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸುಬೋಧ್ ಯಾದವ್ ಮಂಗಳವಾರ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕರಿಗೆ ಬೋಧನಾ ಕೌಶಲಗಳನ್ನು ಕಲಿಸುವುದು ಯೋಜನೆಯ ಉದ್ದೇಶವಾಗಿದೆ. 1,250 ಸಂಪನ್ಮೂಲ ವ್ಯಕ್ತಿಗಳು ರಾಜ್ಯದ 2.17 ಲಕ್ಷ ಸರ್ಕಾರಿ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಬಗೆ, ಭಾಷಾ ಬೋಧನೆಯ ತೊಡಕುಗಳು ಹಾಗೂ ಉತ್ತಮ ಸಂವಹನದ ಬಗ್ಗೆ ತರಬೇತಿ ನೀಡಲಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಇಂಗ್ಲಿಷ್ ಕಲಿಸಲು ಸಹಕಾರಿಯಾಗಲಿದೆ.

ಮಹಾರಾಷ್ಟ್ರ, ಬಿಹಾರ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯ ಕೌಶಲಗಳನ್ನು ಬೋಧಿಸುವ ಯೋಜನೆಯನ್ನು ಜಾರಿಗೆ ತಂದಿರುವ ಬ್ರಿಟಿಷ್ ಕೌನ್ಸಿಲ್, ರಾಜ್ಯದಲ್ಲಿ 2010ರಿಂದ ಕೌಶಲ ಅಭಿವೃದ್ಧಿ ತರಗತಿಗಳನ್ನು ನಡೆಸುತ್ತಿದೆ. ಈ ಯೋಜನೆಗೆ ಯೂನಿಸೆಫ್‌ನ ಸಹಕಾರವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.