ADVERTISEMENT

ಶುದ್ಧ ಕನ್ನಡ ಬೆಳೆಸಲು ಕರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಬೆಂಗಳೂರು: ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಘಟನೆಗಳು ನಿರ್ದಿಷ್ಟ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶುದ್ಧ ಕನ್ನಡವನ್ನು ಬೆಳೆಸಲು ಇಚ್ಛಾ ಶಕ್ತಿಯ ಕೊರತೆಯಿದೆ’ ಎಂದು ಸಾಹಿತಿ, ನಿರ್ದೇಶಕ ಸಿ.ವಿ.ಶಿವಶಂಕರ್ ಅಭಿಪ್ರಾಯಪಟ್ಟರು.ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬಾದಾಮಿ ಹೌಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರಂಭದ ದಿನಗಳಲ್ಲಿ ಗೀತರಚನಕಾರ ಹುಣಸೂರು ಕೃಷ್ಣಮೂರ್ತಿ ಅವರೊಂದಿಗೆ ಕಾರ್ಯನಿರ್ವಹಿಸಿದ್ದು, ಸುಬ್ಬಯ್ಯ ನಾಯ್ಡು ನಾಟಕ ಕಂಪೆನಿಯಲ್ಲಿದ್ದಾಗ ಪ್ರಥಮ ಬಾರಿಗೆ ‘ಹೋಳಿ’ ಕುರಿತು ಗೀತೆ ಬರೆದಿದ್ದು, ಆ ಮೂಲಕ ‘ಸಿರಿವಂತನಾದರೂ ಕನ್ನಡ ನಾಡಲ್ಲೇ ಜನಿಸುವೆ...’ ಅಂತಹ ಹಲವು ಯಶಸ್ವಿ ಗೀತೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರ ಕುರಿತು ವಿವರವಾಗಿ ತಿಳಿಸಿದರು.‘ನಾಟ್ಯ ಮತ್ತು ಅಭಿನಯದ ಗೀಳು ನನ್ನನ್ನು ಚಿತ್ರರಂಗದ ಹಲವು ಮಜಲುಗಳಲ್ಲಿ ದುಡಿಯುವಂತೆ ಪ್ರೇರೇಪಿಸಿತು. ಚಿತ್ರರಂಗದಲ್ಲಿ ಯಶಸ್ಸು ಗಳಿಸಲು ಅಭಿನಯ, ತಂತ್ರಜ್ಞಾನ, ಪ್ರಸಾದನ, ಸಂಗೀತ, ಸಾಹಿತ್ಯ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತಿ ಪಡೆದಿರಬೇಕು’ ಎಂದು ತಿಳಿಸಿದರು.

‘ಮನೆ ಕಟ್ಟಿ ನೋಡು’ ಸಿನಿಮಾದ ಮೂಲಕ ದ್ವಾರಕೀಶ್ ಹಾಸ್ಯನಟರಾಗಿ ಪರಿಚಯಗೊಂಡಿದ್ದನ್ನು ತಿಳಿಸಿದರು. ತಮ್ಮ ಸಿನಿಮಾಗಳ ಮೂಲಕ  ರಾಜೇಶ್, ಕಲ್ಪನಾ, ಮಂಜುಳಾ ಅವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಕುರಿತು ವಿವರಿಸಿದರು.‘ನನ್ನ ನಿರ್ದೇಶನದ ‘ಕನ್ನಡ ಕುವರ’ ಚಿತ್ರಕ್ಕೆ ಇನ್ನೂ ತೆರೆ ಕಾಣುವ ಭಾಗ್ಯ ದೊರೆತಿಲ್ಲ, ಒಂದು ಕನ್ನಡ ಸಮ್ಮೇಳನ ಪ್ರತಿಬಿಂಬಿಸುವಷ್ಟು ಭಾಷಾ ಕಾಳಜಿ ಈ ಒಂದು ಚಿತ್ರದಲ್ಲಿ ವ್ಯಕ್ತವಾಗಿದೆ. ಚಿತ್ರ ಬಿಡುಗಡೆ ಮಾಡುವುದಾಗಿ ಸರ್ಕಾರ ನೀಡಿದ್ದ ಆಶ್ವಾಸನೆ ಈವರೆಗೆ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೊಟ್ಟಪಾಡಿಗಾಗಿ ಪರಭಾಷಾ ನಟರ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುತ್ತಿದೆ. ಆದರೆ ಈಗ ಕನ್ನಡ ಭಾಷೆಯ ನಟ ನಟಿಯರುಗಳಿಗೆ ಕನ್ನಡವನ್ನು ಕಲಿಸುವ ಅಗತ್ಯವಿದೆ. ಶುದ್ದ ಕನ್ನಡ ಸಾಹಿತ್ಯದ ಕಾದಂಬರಿ ಆಧಾರಿತ ಚಿತ್ರಗಳನ್ನು ಯುವ ಕನ್ನಡಿಗರು ಪ್ರೋತ್ಸಾಹಿಸಬೇಕಿದೆ’ ಎಂದರು. ಅಕಾಡೆಮಿ ಸದಸ್ಯೆ ಎಚ್.ಎಸ್.ಸಾವಿತ್ರಿ, ಸಿ.ವಿ.ಶಿವಶಂಕರ್ ಅವರ ಕುಟುಂಬ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.