ADVERTISEMENT

‘ಶೂನ್ಯ ತೆರಿಗೆ; ಮಾತು ತಪ್ಪಿದ ಕೇಂದ್ರ ಸರ್ಕಾರ’

ಕೈ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲು ಒತ್ತಾಯಿಸಿ ‘ಗ್ರಾಮ ಸೇವಾ ಸಂಘ’ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ರಂಗಕರ್ಮಿ ಪ್ರಸನ್ನ ಪ್ರತಿಭಟನೆಯಲ್ಲಿ ಮಾತನಾಡಿದರು – ಪ್ರಜಾವಾಣಿ ಚಿತ್ರ
ರಂಗಕರ್ಮಿ ಪ್ರಸನ್ನ ಪ್ರತಿಭಟನೆಯಲ್ಲಿ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಡವರು ಹಾಗೂ ಶ್ರಮಜೀವಿಗಳು ತಯಾರಿಸುತ್ತಿರುವ ಕೈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೈಬಿಡಲು ಕೇಂದ್ರ ಸರ್ಕಾರವು ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ‘ಗ್ರಾಮ ಸೇವಾ ಸಂಘ’ ಸದಸ್ಯರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಪುರಭವನ ಎದುರು ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ‘29 ಬಗೆಯ ಕೈ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಚುನಾವಣೆ ವೇಳೆಯಲ್ಲಾದರೂ ರಾಜಕೀಯ ಪಕ್ಷಗಳು, ತಮ್ಮ ಪ್ರಣಾಳಿಕೆಯಲ್ಲಿ ಕೈ ಉತ್ಪನ್ನಗಳ ಬಗ್ಗೆ ನಿಲುವು ವ್ಯಕ್ತಪಡಿಸಬಹುದು ಎಂಬ ನಿರೀಕ್ಷೆ ಇತ್ತು. ಅದು ಈಗ ಹುಸಿಯಾಗಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದನ್ನು ಅಂತಿಮ ಘಟ್ಟದವರೆಗೂ ಕೊಂಡೊಯ್ಯಲಿದ್ದೇವೆ’ ಎಂದರು.

ADVERTISEMENT

‘2017ರಲ್ಲಿ ನಡೆದಿದ್ದ 23ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಿರ್ಣಯದಂತೆ, ಕೈ ಉತ್ಪನ್ನಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಶಿಫಾರಸುಗಳು ಏನು? ಅದರ ಜಾರಿಗೆ ಕೈಗೊಂಡ ಕ್ರಮಗಳೇನು? ಎಂಬುದನ್ನು ಬಹಿರಂಗಪಡಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೈ ಉತ್ಪನ್ನಗಳ ಮೇಲಿನ ತೆರಿಗೆ ರದ್ದುಪಡಿಸುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಜನವರಿಯಲ್ಲಿ ಭರವಸೆ ನೀಡಿದ್ದರು. ಮೂರು ತಿಂಗಳಾದರೂ ಆ ಭರವಸೆ ಈಡೇರಿಲ್ಲ. ಸಚಿವರು ಹೇಳಿದ್ದು ಸುಳ್ಳಾ ಎಂಬ ಪ್ರಶ್ನೆ ಮೂಡಿದೆ. ಇಂದಿಗೂ ಗ್ರಾಮಗಳಲ್ಲಿ ಕೈ ಉತ್ಪಾದಕರು, ನೇಕಾರರು ತೆರಿಗೆಯ ಭಾರದಿಂದ ನಲುಗಿ ಹೋಗಿದ್ದಾರೆ’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ಯಾವ ಪಕ್ಷದವರೂ ತಮ್ಮ ಪ್ರಣಾಳಿಕೆಯಲ್ಲಿ ಕೈ ಉತ್ಪನ್ನಗಳ ಬಗ್ಗೆ ಉಲ್ಲೇಖಿಸಿಲ್ಲ. ಅವರಿಗೆ ನಾವೆಲ್ಲರೂ ತಕ್ಕ ಪಾಠ ಕಲಿಸಬೇಕು. ಚುನಾವಣೆ ಆಗುವವರೆಗೂ ಕಾಯುತ್ತೇವೆ. ನಂತರ, ಅನಿರ್ಧಿಷ್ಟ ಹೋರಾಟ ನಡೆಸಲಿದ್ದೇವೆ’ ಎಂದರು.

’ಕೈ ಉತ್ಪನ್ನಗಳನ್ನು ನಾವೆಲ್ಲರೂ ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಬಹುಪಾಲು ಮಂದಿ ವಿದೇಶಿ ಉತ್ಪನ್ನಗಳನ್ನು ಬಳಸಿ, ಅವರ ಗುಲಾಮರಾಗುತ್ತಿದ್ದಾರೆ. ಪ್ರತಿಯೊಬ್ಬರು ಕೈ ಉತ್ಪನ್ನಗಳನ್ನು ಬಳಸುವಂತಾಗಬೇಕು. ಆ ಮೂಲಕ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕು’ ಎಂದು ಹೇಳಿದರು.

ಪ್ರಶ್ನೆಗಳು
* ದೇಶದ ಶೇ 60ರಷ್ಟು ಉತ್ಪನ್ನಗಳನ್ನು ನಿಭಾಯಿಸುತ್ತಿರುವ ಕೈ ಉತ್ಪಾದಕ ಜನರನ್ನು ನಿರ್ಲಕ್ಷಿಸುತ್ತಿರುವುದೇಕೆ.
* ಕೈ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸುತ್ತಿಲ್ಲವೇಕೆ.
* ಅಕ್ಕಿಯನ್ನಷ್ಟೇ ಪಡಿತರವನ್ನಾಗಿ ಏಕೆ ಹಂಚುತ್ತಿದ್ದಿರಾ. ಸಿರಿಧಾನ್ಯ, ಎಣ್ಣೆಕಾಳುಗಳನ್ನು ಏಕೆ ನಿರ್ಲಕ್ಷಿಸುತ್ತಿದ್ದಿರಾ.
* ಹತ್ತಿಯ ನೂಲು, ಬಣ್ಣಗಳು, ಬೊಂಬು, ಬೆತ್ತ, ಎತ್ತು, ಎಮ್ಮೆ, ಕುರಿ, ಲೋಹಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿಲ್ಲವೇಕೆ.
* ಖಾಸಗಿ ಸೂಪರ್‌ ಮಾಡುಕಟ್ಟೆಗಳ ಬದಲಿಗೆ ಜನಪರ ಸಂತೆಗಳನ್ನೇಕೆ ಸ್ಥಾಪಿಸುತ್ತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.