ADVERTISEMENT

ಸಂಪುಟ ತೀರ್ಮಾನ ಒಪ್ಪಲು ಸಾಧ್ಯವಿಲ್ಲ: ಉಜ್ಜಯಿನಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:43 IST
Last Updated 19 ಮಾರ್ಚ್ 2018, 19:43 IST

ಬೆಂಗಳೂರು: ರಾಜ್ಯ ಸರ್ಕಾರ ಆತುರದಿಂದ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಿದ್ದು, ಇದರಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಉಜ್ಜಯನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

‘ಲಿಂಗಾಯತ, ವೀರಶೈವ– ಲಿಂಗಾಯತ, ಬಸವತತ್ವ ಪರಿಪಾಲಕರು’ ಎಂಬ ಪದಗಳನ್ನು ಬಳಸಲಾಗಿದೆ. ಇದರಲ್ಲಿ ಸ್ಪಷ್ಟತೆ ಇಲ್ಲ. ಆತುರದಲ್ಲಿ ಈ ಕ್ರಮ ಕೈಗೊಂಡಿರುವುದು ನೋವಿನ ಸಂಗತಿ’  ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ಒಂದೆರಡು ದಿನಗಳಲ್ಲಿ ಮೂರು ಸಾವಿರ ಮಠಗಳ ಸದಸ್ಯತ್ವ ಹೊಂದಿರುವ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಚುನಾವಣೆ ಹೊಸ್ತಿಲಲ್ಲಿ ಇರುವಾಗ ಆತುರದ ತೀರ್ಮಾನ ಅಗತ್ಯವಿತ್ತೆ. ಮುಖ್ಯಮಂತ್ರಿಯವರು ಒಗ್ಗಟ್ಟಾಗಿ ಬಂದರೆ ಶಿಫಾರಸು ಮಾಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ತಜ್ಞರ ಸಮಿತಿ ನೇಮಿಸಿದರು. ಅದರಲ್ಲಿ ನಮ್ಮ ಧರ್ಮಕ್ಕೆ ಸಂಬಂಧಿಸಿದ ಒಬ್ಬ ತಜ್ಞರನ್ನೂ ಸೇರಿಸಲಿಲ್ಲ. ಆರು ತಿಂಗಳ ಕಾಲಾವಕಾಶ ನೀಡಿ. ಕೊನೆಗೆ ತರಾತುರಿಯಲ್ಲಿ ವರದಿ ಪಡೆದರು’ ಎಂದು ಅವರು ದೂರಿದರು.

ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಲಿಂಗಾಯತರಿಗಾಗಿ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎಂದು ಸ್ವಾಮೀಜಿ ತಿಳಿಸಿದರು.

ಪರಿಷತ್ತಿನಲ್ಲಿ ತೀರ್ಮಾನ:

ಈ ಬಗ್ಗೆ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ನಲ್ಲಿ ಚರ್ಚಿಸಿ, ತೀರ್ಮಾನ ಪ್ರಕಟಿಸುವುದಾಗಿ ಕಾಶಿಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.