ಬುದ್ಧಿಜೀವಿಗಳು ಭ್ರಮಾಲೋಕದಲ್ಲಿ- ಶಿಕ್ಷಣ ಸಚಿವ ಕಾಗೇರಿ ಟೀಕೆ
ಬೆಂಗಳೂರು: `ನಮ್ಮ ಸನಾತನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವುದನ್ನೇ ಬುದ್ಧಿಜೀವಿಗಳು ಕೇಸರೀಕರಣ ಎಂದು ಟೀಕಿಸುವುದಾದರೆ ಟೀಕಿಸಲಿ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಬುದ್ಧಿಜೀವಿಗಳು ಭ್ರಮಾಲೋಕದಲ್ಲಿದ್ದಾರೆ. ತಮ್ಮದೇ ಆದ ಭ್ರಮಾಲೋಕವನ್ನು ಸೃಷ್ಟಿಸಲು ಪ್ರಯತ್ನಿಸುವ ಬುದ್ಧಿಜೀವಿಗಳು ಅದರಿಂದ ಹೊರಬರಬೇಕು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಇಲ್ಲಿ ಹೇಳಿದರು.
ಸಂಸ್ಕೃತ ಭಾರತೀ ಪ್ರಕಾಶನ ಹೊರ ತಂದಿರುವ `ಹೆಮ್ಮೆಯ ಭಾರತ~ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಈ ಹಿಂದೆ ಹೊಸ ಪಠ್ಯಕ್ರಮ ರಚನೆಯಾದಾಗಲೂ ಬುದ್ಧಿಜೀವಿಗಳು ಕೇಸರೀಕರಣದ ವಿವಾದವೆನ್ನಿಬ್ಬಿಸಿದರು.
ಅದಕ್ಕೆಲ್ಲಾ ಸರ್ಕಾರ ಕಿವಿಗೊಡುವುದಿಲ್ಲ. ನಾವು ಸನಾತನ ಸಂಸ್ಕೃತಿಯ ವಾರಸುದಾರರು ಎಂಬುದಕ್ಕೆ ಅಭಿಮಾನ ಪಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವುದು ಹೆಮ್ಮೆಯ ವಿಷಯ. ಅದನ್ನೂ ಬುದ್ದಿಜೀವಿಗಳು ಕೇಸರೀಕರಣ ಎಂದು ಕರೆದುಕೊಂಡರೆ ಕರೆದುಕೊಳ್ಳಲಿ~ ಎಂದು ಸವಾಲೆಸೆದರು.
`ಕೇವಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸವಲ್ಲ. ನಮ್ಮ ನಾಡಿನ ಸಂಸ್ಕೃತಿ ಬಗ್ಗೆ ಹೆಮ್ಮೆ ಮೂಡಿಸುವಂಥದ್ದು ಕೂಡ ಸರ್ಕಾರದ ಕರ್ತವ್ಯ. ಸರ್ಕಾರ ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆಗೆ ಬದ್ಧವಾಗಿದೆ. ಗುಲಾಮತನದಿಂದ ಹೊರಬಂದು ರಾಷ್ಟ್ರದ ಬಗ್ಗೆ ಅಭಿಮಾನಪಡುವಂಥ ಮಾನಸಿಕತನ ಜನರಲ್ಲಿ ಬಲವಾಗಿ ಬೇರೂರಬೇಕು~ ಎಂದು ಪ್ರತಿಪಾದಿಸಿದರು.
ಶಾಲಾ- ಕಾಲೇಜುಗಳಿಗೆ ಒದಗಿಸುವ ಭರವಸೆ: `ಹೆಮ್ಮೆಯ ಭಾರತ~ ಗ್ರಂಥವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಶಾಲಾ- ಕಾಲೇಜು ಹಾಗೂ ಗ್ರಂಥಾಲಯಗಳಿಗೆ ಗ್ರಂಥವನ್ನು ತಲುಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.
`ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಜತೆ ಚರ್ಚಿಸಿ ಸಂಸ್ಕೃತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕೂಡ ಪ್ರಯತ್ನಿಸಲಾಗುವುದು~ ಎಂದು ಅವರು ಆಶ್ವಾಸನೆ ನೀಡಿದರು.
`ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕೃತಿಯ ಒಳನೋಟವನ್ನು ಪರಿಚಯಿಸುವ ಇಂತಹ ಗ್ರಂಥಗಳು ಯುವ ಜನರನ್ನು ತಲುಪುವುದು ಅನಿವಾರ್ಯವಾಗಿದೆ. ಸಂಸ್ಕೃತ ಪ್ರಚಾರ, ಸಂರಕ್ಷಣೆ ಹಾಗೂ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ~ ಎಂದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸ್ಕೃತ ಭಾರತೀ ಪ್ರಕಾಶನದ ಪ್ರಮುಖ ಚ.ಮೂ. ಕೃಷ್ಣಶಾಸ್ತ್ರಿ ಮಾತನಾಡಿದರು. ಸ್ಪ್ಯಾನ್ ಪ್ರಿಂಟ್‌ನ ಮಾಲೀಕ ಕೆ. ನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.