ಬೆಂಗಳೂರು: ಮುಂಬರುವ ಹಣಕಾಸು ವರ್ಷದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ನಿಧಿಯನ್ನು ರದ್ದುಗೊಳಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವ ಆರ್. ಅಶೋಕ ಶನಿವಾರ ಇಲ್ಲಿ ಹೇಳಿದರು.
ಯಡಿಯೂರು ವಾರ್ಡ್‌ನ ತ್ಯಾಗರಾಜನಗರ ಬಡಾವಣೆಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇತರೆ ಸದಸ್ಯರಿಂದ ಹೆಚ್ಚುವರಿ ನಿಧಿಗೆ ಬೇಡಿಕೆ ಬರುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದರು.
ಪ್ರಸ್ತುತ ಮೇಯರ್ ನಿಧಿಗೆ 150 ಕೋಟಿ ಹಾಗೂ ಉಪ ಮೇಯರ್ ನಿಧಿಗೆ 25 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಆದರೆ, ಬಿಬಿಎಂಪಿಯು ಸದ್ಯ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.
ಇದರಿಂದ ಮುಂದಿನ ದಿನಗಳಲ್ಲಿ ಮೇಯರ್ ಹಾಗೂ ಉಪ ಮೇಯರ್ ನಿಧಿಗೆ ದೊಡ್ಡ ಪ್ರಮಾಣದ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಕೆಲ ಸದಸ್ಯರಿಂದ ನಿಧಿಯಲ್ಲಿ ಬಹಳ ವ್ಯತ್ಯಾಸಗಳಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಿಧಿಯನ್ನೇ ರದ್ದುಪಡಿಸುವ ಪ್ರಸ್ತಾಪ ಸರ್ಕಾರ ಮುಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.