ಬೆಂಗಳೂರು: `ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ನಿಯಮದ ಅನ್ವಯ ವರ್ಷದಲ್ಲಿ 2 ಬಾರಿ ಅಂದರೆ, ಜನವರಿ ಮತ್ತು ಜುಲೈ ತಿಂಗಳಲ್ಲಿ ಸಭೆ ನಡೆಸಬೇಕಾಗಿತ್ತು, ಆದರೆ, ಇದುವರೆಗೂ ಯಾವುದೇ ಸಭೆ ನಡೆದಿಲ್ಲ~ ಎಂದು ಎಸ್‌ಸಿ/ಎಸ್‌ಟಿ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ-ಕರ್ನಾಟಕ ರಾಜ್ಯ ಸಂಚಾಲಕಿ ಪಿ. ಯಶೋದ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಸಂಬಂಧ ಏ.14 ರಂದು ವಿಧಾನ ಸೌಧದ ಬಳಿ ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸರಿಯಾದ ಅನುಷ್ಠಾನಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಲು ಹೋದಾಗ, ಪೊಲೀಸರು ದೌರ್ಜನ್ಯ ಎಸಗಿದ್ದಾರೆ~ ಎಂದು ಆರೋಪಿಸಿದರು.
`ಅಲ್ಲಿ ಮಹಿಳೆಯರನ್ನದೆ, ಒಟ್ಟು 8 ಜನರನ್ನು ಬಂಧಿಸಿ, ವಿಧಾನ ಸೌಧದ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸದೆ, ಖಾಲಿ ಹಾಳೆಯ ಮೇಲೆ ರುಜು ಹಾಕುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ವಕೀಲರ ಮಧ್ಯಸ್ಥಿಕೆಯಿಂದಾಗಿ ಸಂಜೆ 5.30 ಕ್ಕೆ ಬಿಡುಗಡೆ ಮಾಡಿದ್ದಾರೆ. ಪೊಲೀಸರು ನ್ಯಾಯ ಕೇಳಲು ಹೋದವರ ಮೇಲೆ ಅನ್ಯಾಯ ಎಸಗಿದ್ದಾರೆ~ ಎಂದು ಹೇಳಿದರು.
`ಸರ್ಕಾರವು ಈ ತಕ್ಷಣದ ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ನಡೆಯದೇ ಇರುವ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿ ಮತ್ತು ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಇದೇ 19 ರಂದು ಪುರಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.