ADVERTISEMENT

ಸಮೂಹ ಧ್ವನಿಯೊಂದಿಗೆ ಖಾಸಗಿ ನೋವು

ಸುಬ್ಬು ಹೊಲೆಯಾರ್‌ ಕಾವ್ಯ: ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST

ಬೆಂಗಳೂರು:  ‘ಕವಿ ಸುಬ್ಬು ಹೊಲೆ ಯಾರ್‌ ಅವರ ಕವನಗಳಲ್ಲಿ ಸಮೂಹ ಧ್ವನಿಯ ಜತೆಗೆ ಖಾಸಗಿ ನೋವುಗಳು ಪ್ರತಿಬಿಂಬಿತವಾಗಿವೆ’ ಎಂದು ಕವಿ ಎಚ್‌. ಎಸ್‌.ವೆಂಕಟೇಶಮೂರ್ತಿ ಹೇಳಿದರು. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ದಲಿತ ಸಂಘರ್ಷ ಸಮಿತಿಯು ಶನಿವಾರ ನಗರದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಸುಬ್ಬು ಹೊಲೆ ಯಾರ್‌ ಅವರ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಕಾವ್ಯದಲ್ಲಿ ಭಿನ್ನ ಸಂಘ ರ್ಷಗಳಿವೆ. ಕಾವ್ಯ ವ್ಯಕ್ತಿ ಸಂಕೇತವಾಗ ಬೇಕು ಎಂಬುದು ಒಂದು ವಾದ ವಾ ದರೆ, ಕಾವ್ಯ ಸಮೂಹದ  ಧ್ವನಿಯಾ ಗಬೇಕು ಎಂಬುದು ಇನ್ನೊಂದು ವಾದ ವಾಗಿದೆ. ಪಂಪ, ರನ್ನರು ವೈಯಕ್ತಿಕ ನೆಲೆಯಲ್ಲಿ ಕಾವ್ಯವನ್ನು ಕಟ್ಟಲು ಪ್ರಯತ್ನಿಸಿದರು. ಆದರೆ, ವಚನ ಚಳವಳಿ ಮತ್ತು ದಾಸರ ಕಾಲದಲ್ಲಿ ಕಾವ್ಯವು ಸಮೂಹದ ಧ್ವನಿಯಾಯಿತು’ ಎಂದರು.

‘ಭಾಷೆಯಲ್ಲಿ ಅನೇಕ ಸೂಕ್ಷ್ಮತೆಗಳಿವೆ. ಅವುಗಳನ್ನು ಗುರುತಿಸುವವನು ಶ್ರೇಷ್ಠ ಕವಿಯಾಗಲು ಸಾಧ್ಯ. ಸುಬ್ಬು ಅವರ ಕವನಗಳಲ್ಲಿ ನಾನು ಮತ್ತು ನಾವು ಎಂಬುದು ಸಮಾನವಾಗಿ ಸಮ್ಮಿಳಿತ ವಾಗಿದೆ. ಅವರ ನೋವಿನ ಧ್ವನಿಯು ಇಲ್ಲಿ ಹೊರಹೊಮ್ಮಿದೆ’ ಎಂದರು. ‘ಗಾಂಧಿ ಮತ್ತು ಅಂಬೇಡ್ಕರ್‌ ಅವರ ಸಂವಾದವನ್ನು ಅದ್ಭುತವಾಗಿ ರೂಪಿಸಿ ದ್ದಾರೆ. ಗಾಂಧಿ ಮೋಡವಾದರೆ, ಅಂಬೇ ಡ್ಕರ್‌ ಮಣ್ಣು. ಇವರಿಬ್ಬರ ಆದರ್ಶದ ಸಮಾಗಮದಿಂದ ಹುಟ್ಟುವುದೇ ಮಳೆ ಯಾಗಿದೆ ಎಂದು ಅವರು ಕವನದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

‘ಅನ್ನದ ಮೇಲೆ ಹಸಿದವರ ಹೆಸರಿರಲಿ, ನನ್ನ ಹೆಸರು ಕೊನೆಲಿರಲಿ’ ಎಂಬ ಮಾತನ್ನು ಒಬ್ಬ ಕವಿ ಮಾತ್ರ ಹೇಳಲು ಸಾಧ್ಯ. ಸುಬ್ಬು ಅವರು ರೂಪಕದ ಭಾಷೆಯಲ್ಲಿ, ಭಾವದ ರೂಪದಲ್ಲಿ ಎಲ್ಲ ಕವನಗಳನ್ನು ರೂಪಿಸಿದ್ದಾರೆ. ಈ ಎಲ್ಲ ಕವನಗಳಲ್ಲಿ ಅವರಲ್ಲಿನ ಅಗ್ನಿಪರ್ವತ ಕಾಣುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.