ADVERTISEMENT

ಸರಣಿ ಕೊಲೆಗಳಿಂದ ಬೆಚ್ಚಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಬೆಂಗಳೂರು: ನಗರದಲ್ಲಿ ಕಳೆದ ಹನ್ನೆರಡು ದಿನಗಳಲ್ಲಿ (ಆ.1ರಿಂದ) ಮಹಿಳೆಯರು ಸೇರಿದಂತೆ 12 ಮಂದಿಯ ಕೊಲೆ ನಡೆದಿದ್ದು, ಸರಣಿ ಕೊಲೆ ಪ್ರಕರಣಗಳಿಂದ ಜನತೆ ಬೆಚ್ಚಿಬಿದ್ದಿದ್ದಾರೆ.

ವೈಯಕ್ತಿಕ ದ್ವೇಷ, ಹಣಕಾಸು ವಿಷಯ, ಅನೈತಿಕ ಸಂಬಂಧ, ಕೌಟುಂಬಿಕ ಕಲಹ, ಹಣದಾಸೆ ಹೀಗೆ ವಿವಿಧ ಕಾರಣಕ್ಕಾಗಿ ನಗರದ ಹಲವೆಡೆ ಪ್ರತಿನಿತ್ಯ ನಡೆಯುತ್ತಿರುವ ಕೊಲೆಗಳು ನಗರವಾಸಿಗಳ ನಿದ್ದೆಗೆಡಿಸಿವೆ.

ಮತ್ತೊಂದೆಡೆ ಮನೆಯಲ್ಲಿರುವ ಒಂಟಿ ಮಹಿಳೆಯರು ಮತ್ತು ವೃದ್ಧರು ಸದಾ ಜೀವ ಭಯದಲ್ಲೇ ಬದುಕು ದೂಡುವಂತಾಗಿದೆ.

`ಪೊಲೀಸರು ಕೊಲೆ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನೇನೋ ಬಂಧಿಸುತ್ತಿದ್ದಾರೆ. ಆದರೆ, ಕೊಲೆಗಳು ಮಾತ್ರ ನಡೆಯುತ್ತಲೇ ಇವೆ. ಕೊಲೆಗಳು ನಡೆಯುತ್ತಿರುವ ರೀತಿ ನೋಡಿದರೆ ಬೆಚ್ಚಿ ಬೀಳುವಂತಾಗುತ್ತಿದೆ.

ಸ್ವರ್ಣಾಂಬ ದಂಪತಿ ಕೊಲೆಯಾದ ನಂತರ ರಸ್ತೆಯಲ್ಲಿ ಒಂಟಿಯಾಗಿ ಓಡಾಡಲು ಆಗುತ್ತಿಲ್ಲ. ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಲು ಸಹ ಭಯವಾಗುತ್ತಿದೆ~ ಎಂದು ಜೆ.ಪಿ.ನಗರ ನಿವಾಸಿ ಹನುಮಂತಯ್ಯ ಹೇಳಿದರು.

`ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಬೇಕು ಎಂಬ ಉದ್ದೇಶದಿಂದಲೇ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅದನ್ನು ಅರಿತು ಪೊಲೀಸರಿಗೆ ಸಹಕಾರ ನೀಡಬೇಕು. ಹಣ ದೋಚಲು ದುಷ್ಕರ್ಮಿಗಳು ನಾನಾ ರೀತಿಯ ವೇಷ ಧರಿಸುತ್ತಾರೆ. ಇದನ್ನು ತಿಳಿಯದ ನಾಗರಿಕರು ಹಂತಕರ ಸಂಚಿಗೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕರು ಈಗಲಾದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

`ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು, ಯಾರಾದರೂ ಬಾಗಿಲು ಬಡಿದಾಗ ಬಂದಿರುವವರು ಯಾರೆಂಬುದನ್ನು ದೃಢಪಡಿಸಿಕೊಂಡ ನಂತರವಷ್ಟೇ ಬಾಗಿಲು ತೆಗೆಯುವುದು, ಮನೆಯ ಸಮೀಪ ಶಂಕಿತ ವ್ಯಕ್ತಿಗಳು ಕಾಣಿಸಿಕೊಂಡರೆ ಕೂಡಲೇ ಸಮೀಪದ ಠಾಣೆಗೆ ಮಾಹಿತಿ ನೀಡುವುದು, ಹೀಗೆ ಕೆಲವು ಅಂಶಗಳ ಅರಿವು ಬೆಳೆಸಿಕೊಳ್ಳಬೇಕು.

ಮುಖ್ಯವಾಗಿ ನಗರದ ನಿವಾಸಿಗಳು, ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು. ಕೆಲವೊಮ್ಮೆ ಸ್ನೇಹಿತರು ಮತ್ತು ಸಂಬಂಧಿಕರೂ ಶತ್ರುಗಳಾಗುತ್ತಾರೆ. ಈ ಬಗ್ಗೆ ಎಚ್ಚರದಿಂದಿರಬೇಕು~ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.