ADVERTISEMENT

ಸರ್ಕಾರದ ಹಣ ಅಕ್ರಮ ಠೇವಣಿಗೆ ಕಡಿವಾಣ

ಪಿ.ಎಂ.ರಘುನಂದನ್
Published 31 ಆಗಸ್ಟ್ 2017, 9:10 IST
Last Updated 31 ಆಗಸ್ಟ್ 2017, 9:10 IST

ಬೆಂಗಳೂರು: ವಿಪತ್ತು ನಿಧಿ ಸೇರಿದಂತೆ ಸರ್ಕಾರದ ಹಣವನ್ನು ಬ್ಯಾಂಕುಗಳಲ್ಲಿ ನಿಗದಿತ ಠೇವಣಿ ಇಡುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರ, ಈ ಉದ್ದೇಶದಿಂದ ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಮತ್ತು ಅದನ್ನು ನಿರ್ವಹಿಸುವ ಪ್ರಕ್ರಿಯೆಗೆ ಕಠಿಣ ಮಾರ್ಗಸೂಚಿ ರೂಪಿಸಿದೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆ ಕೋಟ್ಯಂತರ ರೂಪಾಯಿ ಯನ್ನು ವಿವಿಧ ಬ್ಯಾಂಕುಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟು ದುರ್ಬಳಕೆ ಮಾಡಿದ ದೂರು ಕೇಳಿ ಬಂದ ಮೂರು ವರ್ಷಗಳ ಬಳಿಕ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಈ ಕುರಿತು, ಆರ್ಥಿಕ ಇಲಾಖೆ ವಿವರವಾದ ಮಾರ್ಗಸೂಚಿ ಹೊರಡಿಸಿದೆ. ಅದರನ್ವಯ, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆಯಾಗುವ ಅನುದಾನವನ್ನು ಬ್ಯಾಂಕುಗಳಲ್ಲಿ ಖಾತೆ ತೆರೆದು ಠೇವಣಿ ಇಡಲು ಅಥವಾ ಅನ್ಯ ಉದ್ದೇಶಕ್ಕೆ ಬಳಸಲು ನಿರ್ಬಂಧ ಹೇರಲಾಗಿದೆ.

ADVERTISEMENT

ನಗರ ಸ್ಥಳೀಯ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳು ಮತ್ತು ಶಾಸನಾತ್ಮಕ ಸಂಸ್ಥೆಗಳಿಗೆ ಈ ಆದೇಶ ಅನ್ವಯ ಆಗಲಿದೆ. ರಾಜ್ಯದ ಖಜಾನೆ ಮೂಲಕವೇ ಈ ನಿಧಿ ನಿರ್ವಹಿಸಬೇಕು ಎಂದು ತಿಳಿಸಿದೆ.

‘ಸಾಲ ಪಡೆಯಲು, ಯೋಜನೆಗೆ ಬಿಡುಗಡೆಯಾದ ಅನುದಾನ ವಾಪಸ್‌ ಹೋಗುವುದನ್ನು ತಡೆಯಲು, ಅನ್ಯ ಉದ್ದೇಶಕ್ಕೆ ಬಳಸುವ ಉದ್ದೇಶದಿಂದ ಠೇವಣಿ ಇಡಲು ಬ್ಯಾಂಕುಗಳಲ್ಲಿ ಖಾತೆ ತೆರೆಯಲಾಗುತ್ತಿದೆ. ಈ ಪ್ರಕ್ರಿಯೆಗೆ ಇನ್ನು ಮುಂದೆ ಅವಕಾಶ ಇಲ್ಲ’ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.

ಈಗ ಜಾರಿಯಲ್ಲಿರುವ ವ್ಯವಸ್ಥೆಯಡಿ ಯಾವುದಾದರೂ ಇಲಾಖೆಯ ನಿರ್ದಿಷ್ಟ ಅಗತ್ಯಗಳನ್ನು ಈಡೇರಿಸಲು ಸಾಧ್ಯವಾಗದೇ ಇದ್ದರೆ ಅಥವಾ ಕಡ್ಡಾಯವಾಗಿ ಅನುದಾನ ಬಳಕೆ ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ಬ್ಯಾಂಕು ಖಾತೆ ತೆರೆಯಲು ಅನುಮತಿ ನೀಡಲಾಗುವುದು. ಅನುದಾನ ನಿರ್ವಹಣೆ ವ್ಯವಸ್ಥೆಯಲ್ಲಿ ನ್ಯೂನತೆಗಳ ಕುರಿತು ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿಗಳ ತಂಡ ನೀಡಿದ ಶಿಫಾರಸುಗಳನ್ನು ಆಧರಿಸಿ ಈ ಮಾರ್ಗಸೂಚಿ ಅಂತಿಮಗೊಳಿಸಲಾಗಿದೆ.

ಅಕ್ರಮವಾಗಿ ಹಣ ಠೇವಣಿ ಇಟ್ಟ ಪ್ರಕರಣಗಳ ಕುರಿತು ತನಿಖೆ ನಡೆಸಲು 2014ರಲ್ಲಿ ರಚಿಸಿದ್ದ ಸಮಿತಿ, 1,128 ಅನಧಿಕೃತ ಬ್ಯಾಂಕು ಖಾತೆಗಳಲ್ಲಿ
₹ 1,335 ಕೋಟಿ ಅಕ್ರಮವಾಗಿ ಜಮೆ ಆಗಿರುವುದನ್ನು ಪತ್ತೆ ಮಾಡಿತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್‌ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಸೇರಿದಂತೆ ಕುಡಿಯುವ ನೀರು ಪೂರೈಕೆ ಅನುಷ್ಠಾನಕ್ಕೆ ತೆಗೆದಿಟ್ಟ ಹಣವನ್ನು ಈ ರೀತಿ ಠೇವಣಿ ಇಡಲಾಗಿತ್ತು.

ಅದೇ ಸಂದರ್ಭದಲ್ಲಿ, ಲೆಕ್ಕ ಪರಿಶೋಧನಾ ಇಲಾಖೆ ನಡೆಸಿದ ಪರಿಶೋಧನೆಯಲ್ಲಿ ಅಕ್ರಮವಾಗಿ ಹಣ ಠೇವಣಿಯಿಂದ ಬೊಕ್ಕಸಕ್ಕೆ
₹ 300 ಕೋಟಿ ನಷ್ಟವಾದ ಸಂಗತಿ ಪತ್ತೆಯಾಗಿತ್ತು. ಹಣ ನಿರ್ವಹಣೆ ಅಕ್ರಮವಾಗಿ ನಡೆಯಲು ಸಮಗ್ರವಾದ ಮಾರ್ಗಸೂಚಿ ಇಲ್ಲದೇ ಇದ್ದುದೇ ಕಾರಣ ಎಂದೂ ಲೆಕ್ಕ ಪರಿಶೋಧನಾ ಇಲಾಖೆ ಗುರುತಿಸಿತ್ತು.

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮಾತ್ರ ಖಾತೆಗಳನ್ನು ತೆರೆಯಬೇಕು. ಅಲರ್ಟ್‌, ಇ– ವರ್ಗಾವಣೆ ಹೊಂದಿರುವ ಕೋರ್ ಬ್ಯಾಂಕಿಂಗ್‌ ಮತ್ತು ಇ– ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವ್ಯವಹರಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.