ADVERTISEMENT

ಸಾಂಸ್ಕೃ ತಿಕ ಅಕಾಡೆಮಿ ಸ್ಥಾ ಪನೆಗೆ ಸಲಹೆ

ಆರನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 20:21 IST
Last Updated 2 ಜನವರಿ 2014, 20:21 IST

ಬೆಂಗಳೂರು: ಸಿನಿಮಾ ಒಳಗೊಂಡಂತೆ ಹಲವು ಕಲೆಗಳನ್ನು ಉತ್ತೇಜಿಸಲು ‘ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ’ಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ  ಚಿಂತನೆ ನಡೆಸಬೇಕು ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಸಲಹೆ ನೀಡಿದರು.

ಕರ್ನಾಟಕ ಚಲನಚಿತ್ರ ಅಕಾ­ಡೆಮಿಯು ಕರ್ನಾ­ಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ 6ನೇ ಬೆಂಗಳೂರು ಅಂತರ­ರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾ­ರಂಭದಲ್ಲಿ ಗುರುವಾರ ಅವರು ಮಾತನಾಡಿದರು. ‘ಕನ್ನಡಿಗರು ದೇಶದ ಸಂಸ್ಕೃತಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಕನ್ನಡಿಗರ ಬುದ್ಧಿವಂತಿಕೆ ಹೆಚ್ಚು ಜನರನ್ನು ತಲುಪಿ, ಅದರಿಂದ ಅವರಿಗೆ ಉಪಯೋಗವಾಗಬೇಕಿದೆ’ ಎಂದು ನುಡಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು, ‘ಟಿವಿ, ಕ್ರಿಕೆಟ್‌ನ ಅಬ್ಬರದಲ್ಲೂ ಪ್ರೇಕ್ಷಕರು ಸಾವಿ­ರಾರು ಸಂಖ್ಯೆಯಲ್ಲಿ ಬಂದಿರುವುದು ಸಿನಿ­ಮೋತ್ಸವದ ಹೆಗ್ಗಳಿಕೆ’ ಎಂದರು. ನಟ ದರ್ಶನ್, ‘ಸಿನಿಮೋತ್ಸವ ಪ್ರೇಕ್ಷಕರ ಜತೆಗೆ ಚಿತ್ರರಂಗ­ದವರಿಗೂ ಹಬ್ಬವಿದ್ದಂತೆ’ ಎಂದು ಹೇಳಿದರು.

ಶ್ರೀಲಂಕಾದ ಚಿತ್ರನಟಿ ಮಾಲಿನಿ ಫೋನ್‌ಸೇಕಾ, ಸರ್ಬಿಯಾದ ಚಿತ್ರ ನಿರ್ದೇಶಕ ಗೋರಾನ್ ಪಾಸ್ಕಾಲ್‌ಜೆವಿಕ್‌, ಸಚಿವರಾದ ರಾಮಲಿಂಗಾ­ರೆಡ್ಡಿ, ಆರ್.ರೋಷನ್ ಬೇಗ್ ಉಪಸ್ಥಿತರಿದ್ದರು. ಕಲಾತ್ಮಕ ನಿರ್ದೇಶಕ ಎಚ್.ಎನ್.ನರಹರಿರಾವ್ ಸಿನಿಮೋತ್ಸವದ ವರದಿ ಮಂಡಿಸಿದರು.

ಉತ್ಸವದ ನಿರ್ದೇಶಕ ಕೆ.ಆರ್.ನಿರಂಜನ್ ಸ್ವಾಗತಿಸಿದರು. ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ವಂದಿಸಿದರು.
ಪ್ರಶಸ್ತಿ ಪ್ರದಾನ: ಏಷ್ಯನ್‌ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಇಸ್ರೇಲ್‌ನ ‘ಎಪಿಲಾಗ್‌’, ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ ‘ಚಿತ್ರಭಾರತಿ’ಯಲ್ಲಿ ಮಂಜು ಬೋರಾ ನಿರ್ದೇಶನದ ಅಸ್ಸಾಮಿ ಚಿತ್ರ ‘ಕೋ ಯಾದ್‌’ ಪ್ರಶಸ್ತಿಗೆ ಭಾಜನವಾದವು.

ಇದೇ ವಿಭಾಗದಲ್ಲಿ ನೀಡಲಾಗುವ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ‘ಅಸ್ತು’ ಮರಾಠಿ ಚಿತ್ರಕ್ಕೆ ನೀಡಲಾಯಿತು. ಕನ್ನಡ ಚಿತ್ರಗಳಿಗೆಂದೇ ನಿಗದಿಪಡಿಸ­ಲಾಗಿದ್ದ ಸ್ಪರ್ಧೆಯಲ್ಲಿ ‘ಮುನ್ಸಿಫ್‌’ನ ನಿರ್ದೇಶಕ ಉಮಾ­ಶಂಕರ್ ಸ್ವಾಮಿ, ‘ತಲ್ಲಣ’ದ ನಿರ್ದೇಶಕ ಸುದರ್ಶನ್ ನಾರಾಯಣ ಹಾಗೂ ನಿರ್ಮಾಪಕಿ ವಸುಂಧರ ಕುಲಕರ್ಣಿ ಮತ್ತು ‘ಎದೆಗಾರಿಕೆ’ ಚಿತ್ರದ ನಿರ್ದೇಶಕಿ ಸುಮನಾ ಕಿತ್ತೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಲನಚಿತ್ರ ಅಕಾಡೆಮಿ ಎಲ್ಲಿದೆ?

ಈ ಪ್ರಶ್ನೆ ಹಾಕಿದ್ದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್!
ಸಮಾರಂಭದಲ್ಲಿ ಹಲವು ಸಲ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಸ್ತಾಪಗೊಂಡಿದ್ದನ್ನು ಗಮನಿಸಿದ ರಾಜ್ಯಪಾಲರು, ‘ನನಗೆ ನಿಜ­ವಾಗಿ­ಯೂ ಗೊತ್ತಿಲ್ಲ ಕರ್ನಾಟಕ ಚಲನಚಿತ್ರ ಅಕಾ­ಡೆಮಿ ಎಲ್ಲಿದೆ ಎಂಬುದು. ಅದು ಎಲ್ಲಿದೆ­ಯೆಂದು ನೀವು ತೋರಿಸುವಿರಾ?’ ಎಂದು ಪ್ರಶ್ನಿಸಿದರು.

ತಮ್ಮ ತಾರುಣ್ಯದ ಅವಧಿಯಲ್ಲಿ ಅನೇಕ ಸಿನಿಮಾ ನೋಡಿದ್ದಾ ಗಿ ಹೇಳಿದ ರಾಜ್ಯಪಾಲರು ‘ನನಗೆ ಡಾ. ರಾಜ್‌ಕುಮಾರ್ , ವಿಷ್ಣುವರ್ಧನ್ ಗೊತ್ತು. ಅಷ್ಟೇ ಅಲ್ಲ, ಬಿ.ಸರೋಜಾದೇವಿ, ಎಸ್.ಜಾನಕಿ ಎಲ್ಲರೂ ಗೊತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT