ADVERTISEMENT

ಸಾಫ್ಟ್‌ವೇರ್ ಎಂಜಿನಿಯರ್ ನಿಗೂಢ ಸಾವು

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ಸಾಫ್ಟ್‌ವೇರ್ ಎಂಜಿನಿಯರ್ ನಿಗೂಢ ಸಾವು
ಸಾಫ್ಟ್‌ವೇರ್ ಎಂಜಿನಿಯರ್ ನಿಗೂಢ ಸಾವು   

ಬೆಂಗಳೂರು:  ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ದುಷ್ಕ ರ್ಮಿಗಳು ನಿದ್ರೆ ಮಾತ್ರೆ ನುಂಗಿಸಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಮಹದೇವಪುರದ ಎಇಸಿಎಸ್ ಲೇಔಟ್‌ನಲ್ಲಿ ಸೋಮವಾರ ನಡೆದಿದೆ. ಕೇರಳ ಮೂಲದ ಸುಬ್ರಮಣಿಯನ್ ಎಂಬುವರ ಪುತ್ರ ಎಸ್. ಶ್ರೀರಾಗ್ (26) ಕೊಲೆಯಾದವರು.

ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು, ವಿವೇಕ್ ಎಂಬುವರ ಜತೆ ಎಇಸಿಎಸ್ ಲೇಔಟ್ ನಾಲ್ಕನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶ್ರೀರಾಗ್, ಎಇಸಿಎಸ್ ಲೇಔಟ್‌ನಲ್ಲೇ ಇರುವ ಸಂಬಂಧಿಕರ ಮನೆಯಲ್ಲಿ ಸೋಮವಾರ ರಾತ್ರಿ ಊಟ ಮಾಡಿ ಮನೆಗೆ ಹೋಗಿದ್ದರು. ನಂತರ ಅವರು ವಿವೇಕ್ ಜತೆ ರಾತ್ರಿ ಒಂದು ಗಂಟೆವರೆಗೆ ಟಿ.ವಿ ನೋಡಿ ಮಲಗಿದ್ದರು.

ಆದರೆ, ಸ್ವಲ್ಪ ಸಮಯದಲ್ಲೇ ಎಚ್ಚರಗೊಂಡ ಅವರು ಮನೆಯಿಂದ ಕಾರಿನಲ್ಲಿ (ನೋಂದಣಿ ಸಂಖ್ಯೆ ಕೆಎ-53, ಝಡ್-6185) ಹೊರ ಹೋಗಿದ್ದರು.  ಬಳಿಕ ವಾಪಸ್ ಬಂದಿರಲಿಲ್ಲ. ಎಇಸಿಎಸ್ ಲೇಔಟ್ `ಡಿ~ ಬ್ಲಾಕ್‌ನ ಎರಡನೇ ಮುಖ್ಯರಸ್ತೆಯ ಉದ್ಯಾನದ ಬಳಿ ನಿಂತಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರು ಕಾಲು ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿರುವುದನ್ನು ನೋಡಿದ ಸ್ಥಳೀಯರು ಆ ಬಗ್ಗೆ ಠಾಣೆಗೆ ಮಂಗಳವಾರ ಮಾಹಿತಿ ನೀಡಿದರು.


ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅವರ ಕೊಲೆಯಾಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಶ್ರೀರಾಗ್ ಅವರಿಗೆ ನಿದ್ರೆ ಮಾತ್ರೆ ನುಂಗಿಸಿದ್ದಾರೆ. ಅಲ್ಲದೇ ಬಾಯಿಗೆ ಬಟ್ಟೆ ತುರುಕಿ, ಕಾಲುಗಳಿಗೆ ಸೆಲೊ ಟೇಪ್ ಸುತ್ತಿದ್ದಾರೆ. ಬಳಿಕ ಪ್ಲಾಸ್ಟಿಕ್ ಕವರ್‌ನಿಂದ ಮುಖವನ್ನು ಮುಚ್ಚಿ, ಮುಖಕ್ಕೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮಹದೇವಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಪ್ರೇಮಾಂಕುರ!
ಆತ್ಮಹತ್ಯೆ ಶಂಕೆ:
`ಶ್ರೀರಾಗ್, ಫೇಸ್‌ಬುಕ್ ಮೂಲಕ ಜ.23ರಂದು ಬೆಂಗಳೂರಿನ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಅವರ ನಡುವೆ ಪ್ರೇಮಾಂಕುರವಾಗಿತ್ತು. ಪರಸ್ಪರರು ಭೇಟಿಯಾಗದೇ ಹಲವು ತಿಂಗಳುಗಳಿಂದ ಪ್ರೀತಿ ಮಾಡುತ್ತಿದ್ದರು. ಈ ವಿಷಯ ತಿಳಿದು ಕೋಪಗೊಂಡಿದ್ದ ಆ ಯುವತಿಯ ಪೋಷಕರು, ವಿದೇಶಿ ಯುವಕನ ಜತೆ ಮಗಳ ಮದುವೆ ನಿಶ್ಚಯ ಮಾಡಿದ್ದರು.
 
ಇದರಿಂದಾಗಿ ಶ್ರೀರಾಗ್ ಮಾನಸಿಕವಾಗಿ ಕುಗ್ಗಿದ್ದರು. ಈ ವಿಷಯವಾಗಿ ಅವರು ಫೇಸ್‌ಬುಕ್‌ನಲ್ಲಿ ಪ್ರೇಯಸಿಯ ಜತೆ ಸಂದೇಶ ವಿನಿಮಯ ಮಾಡಿಕೊಂಡು ನೋವು ತೋಡಿಕೊಂಡಿದ್ದರು~ ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಈ ನಡುವೆ ಶ್ರೀರಾಗ್ ಸಹೋದರಿಯ ಪತಿ ನಾಲ್ಕು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಜತೆಗೆ ಅವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಈ ಎಲ್ಲ ಕಾರಣಗಳಿಂದ ಮನನೊಂದು ಅವರು ನಿದ್ರೆ ಮಾತ್ರೆ ನುಂಗಿ, ಕಾಲು ಮತ್ತು ಮುಖಕ್ಕೆ ಟೇಪ್ ಸುತ್ತಿಕೊಂಡು ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ.  ಅವರ ಕಾರಿನ ಒಳಗಡೆ ನಿದ್ರೆ ಮಾತ್ರೆ ಸಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.