ADVERTISEMENT

‘ಸಾಮಾಜಿಕ ಜಾಲತಾಣಗಳ ಅನ್ವೇಷಣೆ ಸಾಧ್ಯವಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:53 IST
Last Updated 29 ಅಕ್ಟೋಬರ್ 2017, 19:53 IST
ಪ್ರಕಾಶ್‌ ಜಾವಡೇಕರ್‌ ಅವರು ಸರ್‌.ಎಂ.ವಿಶ್ವೇಶ್ವರಯ್ಯ ಬ್ಲಾಕನ್ನು ಉದ್ಘಾಟಿಸಿದರು. ಡಿ.ವಿ.ಸದಾನಂದಗೌಡ, ಶಾಸಕ ಅರವಿಂದ ಲಿಂಬಾವಳಿ, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಇದ್ದರು.
ಪ್ರಕಾಶ್‌ ಜಾವಡೇಕರ್‌ ಅವರು ಸರ್‌.ಎಂ.ವಿಶ್ವೇಶ್ವರಯ್ಯ ಬ್ಲಾಕನ್ನು ಉದ್ಘಾಟಿಸಿದರು. ಡಿ.ವಿ.ಸದಾನಂದಗೌಡ, ಶಾಸಕ ಅರವಿಂದ ಲಿಂಬಾವಳಿ, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಇದ್ದರು.   

ಬೆಂಗಳೂರು: ‘ವಿದೇಶಗಳಲ್ಲಿ ನಡೆಯುವ ಪ್ರಮುಖ ಸಂಶೋಧನೆಗಳಲ್ಲಿ ಭಾರತೀಯರಿರುತ್ತಾರೆ. ಆದರೆ, ಫೇಸ್‌ಬುಕ್‌, ಟ್ವಿಟ್ಟರ್‌, ಗೂಗಲ್‌ನಂತಹ ಸಾಮಾಜಿಕ ಜಾಲತಾಣಗಳ ಅನ್ವೇಷಣೆ ಮಾತ್ರ ನಮ್ಮಿಂದ ಸಾಧ್ಯವಾಗಿಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಬೇಸರ ವ್ಯಕ್ತಪಡಿಸಿದರು.

ಯಲಹಂಕದ ರೇವಾ ವಿಶ್ವ ವಿದ್ಯಾಲಯದಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಬ್ಲಾಕ್‌ ಉದ್ಘಾಟಿಸಿ ಅವರು ಮಾತನಾಡಿದರು.

‘ನವಭಾರತ ನಿರ್ಮಾಣದ ಕುರಿತು ಸಂಶೋಧನೆ ಮತ್ತು ಅನ್ವೇಷಣೆಗಳು ನಡೆಯಬೇಕು. ಇದಕ್ಕಾಗಿ ವಿದ್ಯಾರ್ಥಿಗಳ ಕೌಶಲ ಮತ್ತು ಜಾಣ್ಮೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿ 20 ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ವಿಶೇಷವಾಗಿ ಸಂಶೋಧನೆ, ಅನ್ವೇಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ’ ಎಂದರು.

‘800 ವಿಶ್ವವಿದ್ಯಾಲಯಗಳು ಮತ್ತು 40 ಸಾವಿರಕ್ಕೂ ಹೆಚ್ಚು ಕಾಲೇಜುಗಳಿದ್ದು, 3 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣದ ನೋಂದಣಿ ಪ್ರಮಾಣ ಶೇ 25 ರಷ್ಟಿದ್ದು, 2025ರ ವೇಳೆಗೆ ಈ ಪ್ರಮಾಣ ಶೇ 50ಕ್ಕೆ ತಲುಪಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. 3 ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ತಿರಸ್ಕೃತಗೊಂಡಿರುವ 500 ಎಂಜಿನಿಯರಿಂಗ್‌ ಕಾಲೇಜುಗಳನ್ನು ರದ್ದುಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಕೇಂದ್ರ ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವ ಡಿ.ವಿ. ಸದಾನಂದ ಗೌಡ, ‘ನಿತ್ಯ ವ್ಯವಹಾರಗಳಲ್ಲಿ ತಂತ್ರಜ್ಞಾನ ಮಿಳಿತವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಕಲ್ಪಿಸಲು ಕೇಂದ್ರಸರ್ಕಾರ ನವೋದ್ಯಮ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಮೇಳದಂತಹ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ತಿಳಿಸಿದರು.

ರೇವಾ ವಿಶ್ವವಿದ್ಯಾಲಯ 2017–18ನೇ ಸಾಲಿಗಾಗಿ ರೂಪಿಸಿರುವ ‘ಡಿಜಿಟಲ್‌ ರೇವಾ’ ಮತ್ತು ಆನ್‌ಲೈನ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಿರ್ಮಿಸಿರುವ ‘ರೇವಾ ಟ್ಯೂಬ್‌’ಗೂ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.