ADVERTISEMENT

`ಸಾಹೇಬರು, ಚುನಾವಣೆ ಕೆಲಸಕ್ಕೆ ಹೋಗಿದ್ದಾರೆ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:09 IST
Last Updated 1 ಏಪ್ರಿಲ್ 2013, 19:09 IST
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಮೇಯರ್ ಕಚೇರಿಯನ್ನೂ ಬಂದ್ ಮಾಡಿಸಲಾಗಿದೆ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಮೇಯರ್ ಕಚೇರಿಯನ್ನೂ ಬಂದ್ ಮಾಡಿಸಲಾಗಿದೆ   

ಬೆಂಗಳೂರು: `ಸಾಹೇಬರು ಚುನಾವಣಾ ಕೆಲಸದ ಮೇಲೆ ತೆರಳಿದ್ದಾರೆ. ವಾಪಸು ಬರುವುದು ತಡವಾಗುತ್ತದೆ. ನಾಳೆ ಬೆಳಿಗ್ಗೆ ಬಂದರೆ ಸಿಗಬಹುದು'
-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಆಯುಕ್ತರು ಸೇರಿದಂತೆ ಯಾವುದೇ ಅಧಿಕಾರಿಯನ್ನು ಭೇಟಿ ಮಾಡಲು ಹೋದರೂ ಸಿಗುವ ಸಿದ್ಧ ಉತ್ತರ ಇದಾಗಿದೆ.

`ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಮೀಟಿಂಗ್ ಇದೆ. ಮಧ್ಯಾಹ್ನ ತರಬೇತಿ ಬೇರೆ ಇದೆಯಂತೆ. ನಾಳೆ ಬೆಳಿಗ್ಗೆ ಬಂದರೆ ಸಿಗುತ್ತಾರೆ' ಎಂಬ ವಿವರಣೆಯನ್ನು ಅಲ್ಲಿನ ಸಿಬ್ಬಂದಿ ನೀಡುತ್ತಾರೆ.

ಜನಸಾಮಾನ್ಯರಿಗೆ ಮಾತ್ರವಲ್ಲದೆ ಬಿಬಿಎಂಪಿ ಸದಸ್ಯರಿಗೂ `ಸಾಹೇಬರ ಚುನಾವಣಾ ಕರ್ತವ್ಯ'ದ ಬಿಸಿ ತಟ್ಟಿದೆ. ತಮ್ಮ ವಾರ್ಡ್‌ನಲ್ಲಿ ದೈನಂದಿನ ಕೆಲಸಗಳಿಗೆ ಎದುರಾದ ತೊಡಕು ನಿವಾರಣೆಗಾಗಿ ಅವರು ಕಚೇರಿಗೆ ಬಂದರೆ ಅಧಿಕಾರಿಗಳೇ ಸಿಗುತ್ತಿಲ್ಲ. `ಯಾವ ಅಧಿಕಾರಿಯನ್ನು ಕಾಣಲು ಹೋದರೂ `ಇಲ್ಲ' ಎನ್ನುವ ಉತ್ತರವೇ ಎದುರಾಗುತ್ತದೆ' ಎಂದು ಸದಸ್ಯರೊಬ್ಬರು ಅಳಲು ತೋಡಿಕೊಂಡರು.

`ಅಲ್ಲಿ ಜನರಿಂದ ನಾವು ಉಗಿಸಿಕೊಳ್ಳಬೇಕಾಗಿದೆ. ಇಲ್ಲಿ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಣ್ಣ-ಪುಟ್ಟ ಕೆಲಸಕ್ಕೂ ನೀತಿ ಸಂಹಿತೆ ನೆಪ ಹೇಳಲಾಗುತ್ತಿದೆ. ಇನ್ನೊಂದು ತಿಂಗಳು ಹೇಗೆ ಕಳೆಯುವುದೋ ತಿಳಿಯದಾಗಿದೆ' ಎಂದು ಹೇಳಿದರು. `ಚುನಾವಣಾ ಘೋಷಣೆ ಕೆಲದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದ್ದರೂ ನಮ್ಮ ವಾರ್ಡಿನ ಹಲವು ಕಾಮಗಾರಿಗಳು ಮುಗಿಯುತ್ತಿದ್ದವು. ಎಲ್ಲದಕ್ಕೂ ತಡೆ ಬಿದ್ದಿದೆ' ಎಂದು ಅಲವತ್ತುಕೊಂಡರು.

ಎಲ್ಲ ಉಪ ಆಯುಕ್ತರು, ವಲಯ ಕಚೇರಿ ಮುಖ್ಯಸ್ಥರು ಸೇರಿದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳನ್ನೆಲ್ಲ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. `ತೆರಿಗೆ ಹಣ ಸಂಗ್ರಹ ಮಾಡಬೇಕು. ಘನತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಚುನಾವಣಾ ಅಧಿಕಾರಿಗಳು ಕರೆದಾಗಲೆಲ್ಲ ಅವರ ಮುಂದೆ ಹೋಗಿ ಹಾಜರಾಗಬೇಕು. ಮನೆ ಕಡೆಗೆ ಗಮನಹರಿಸಲೇ ಪುರುಸೊತ್ತಿಲ್ಲ' ಎಂದು ಉಪ ಆಯುಕ್ತರೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡರು.

ಈ ಮಧ್ಯೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಏ. 7 ಕೊನೆಯ ದಿನವಾಗಿದ್ದರಿಂದ ಚುನಾವಣಾ ಘಟಕ ತೀವ್ರ ಒತ್ತಡ ಅನುಭವಿಸುತ್ತಿದೆ. ಹೆಸರು ಸೇರ್ಪಡೆ, ಪಟ್ಟಿ ಪರಿಷ್ಕರಣೆಗೆ ಅರ್ಜಿಗಳ ಮಹಾಪೂರವೇ ಹರಿದು ಬರುತ್ತಿದೆ. ಭಾವಚಿತ್ರ ಇರುವ ಗುರುತಿನ ಚೀಟಿ ನೀಡುವ ಕೆಲಸವೂ ಚುರುಕಿನಿಂದ ನಡೆದಿದೆ.

ಕಚೇರಿಗೆ ಬೀಗ: ರಾಜ್ಯ ವಿಧಾನಸಭೆಗೆ ಮೇ 5ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇಯರ್ ಸೇರಿದಂತೆ ಬಿಬಿಎಂಪಿಯ ಎಲ್ಲ ಪ್ರಮುಖರ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಈ ಕ್ರಮ ಕೈಗೊಂಡಿದ್ದಾರೆ. ಮೇಯರ್ ಡಿ.ವೆಂಕಟೇಶಮೂರ್ತಿ ಅವರ ಕಚೇರಿಯನ್ನು ಬಂದ್ ಮಾಡಲಾಗಿದ್ದು, ಅವರ ಕಚೇರಿ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಪ ಮೇಯರ್ ಎಲ್.ಶ್ರೀನಿವಾಸ್ ಅವರ ಕಚೇರಿ ತೆರೆಯದಂತೆಯೂ ಆದೇಶ ಹೊರಡಿಸಲಾಗಿದೆ.

ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಮೂರೂ ಪಕ್ಷಗಳ ನಾಯಕರೂ ಕಚೇರಿ ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಆಡಳಿತ ಪಕ್ಷದ ನಾಯಕ ಎನ್.ನಾಗರಾಜು, ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಮತ್ತು ಜೆಡಿಎಸ್ ನಾಯಕ ಟಿ.ತಿಮ್ಮೇಗೌಡ ಅವರ ಕಚೇರಿಗಳು ಮುಚ್ಚಿದ್ದು ಸೋಮವಾರ ಕಂಡುಬಂತು.

ತೆರಿಗೆ ಮತ್ತು ಆರ್ಥಿಕ, ಲೆಕ್ಕಪತ್ರ, ಸಾಮಾಜಿಕ ನ್ಯಾಯ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಮಾರುಕಟ್ಟೆ, ಸಾರ್ವಜನಿಕ ಕಾಮಗಾರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ನಗರ ಯೋಜನೆ, ವಾರ್ಡ್‌ಮಟ್ಟದ ಕಾಮಗಾರಿ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಗಳನ್ನು ಕೂಡ ತೆರೆಯದಂತೆ ಆದೇಶ ಹೊರಡಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ಮೇಯರ್ ಸೇರಿದಂತೆ ಎಲ್ಲರಿಗೂ ನೀಡಲಾಗಿದ್ದ ವಾಹನ ಸೌಲಭ್ಯವನ್ನು ಹಿಂದಕ್ಕೆ ಪಡೆಯಲಾಗಿತ್ತು. ಈಗ ಕಚೇರಿಯನ್ನೂ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ. `ಕಚೇರಿಯಲ್ಲಿ ದೈನಂದಿನ ಮತ್ತು ತುರ್ತು ಕಾರ್ಯಗಳು ನಡೆಯುವುದು ಅಗತ್ಯವಾಗಿದ್ದು, ಸಹಾಯಕರ ಕೊಠಡಿಗಳಲ್ಲಿ ಅವರ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣವಾಗಿ ಮುಗಿಯುವತನಕ ಕಚೇರಿ ಬಳಸಲು ಅವಕಾಶ ಇಲ್ಲ' ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಮೇಯರ್ ಕಚೇರಿ ಇನ್ನೊಂದು ತಿಂಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದರೂ ಮೇಯರ್ ಭೇಟಿಗೆ ಬಂದಿದ್ದ ಸಾರ್ವಜನಿಕರು ಪಟ್ಟು ಸಡಿಲಿಸದೆ ಕಚೇರಿ ಮುಂಭಾಗದಲ್ಲಿ ಕುಳಿತಿದ್ದ ದೃಶ್ಯ ಕಂಡುಬಂತು. `ಚುನಾವಣಾ ನೀತಿ ಸಂಹಿತೆ ಪ್ರಕಾರ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಆಯೋಗದ ತೀರ್ಮಾನಗಳಿಗೆ ನಾವೆಲ್ಲ ಸಹಕರಿಸುವುದು ಅನಿವಾರ್ಯವಾಗಿದೆ' ಎಂದು ವೆಂಕಟೇಶಮೂರ್ತಿ ಪ್ರತಿಕ್ರಿಯಿಸಿದರು.

`ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು' ಎಂದು ನಾಗರಾಜು ಮತ್ತು ಗುಣಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.