ADVERTISEMENT

ಸಿಂಗಪುರದಿಂದ ಸ್ಪರ್ಧಿಸಲು ಬಂದ ಎಂಜಿನಿಯರ್

ಲೋಕಸತ್ತಾ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಬೆಂಗಳೂರು: ಮೂರು ದಶಕಗಳ ಕಾಲ ಸಿಂಗಪುರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನಾಗೇಶ್ ವಿಲಾಸ್ ಸಾಖರೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತವರಿಗೆ ಆಗಮಿಸಿದ್ದಾರೆ. ಲೋಕಸತ್ತಾ ಪಕ್ಷದ ಬೆಳಗಾವಿ ಉತ್ತರ ಕ್ಷೇತ್ರದಿಂದ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ 11 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಲೋಕಸತ್ತಾ ಪಕ್ಷ ಸೋಮವಾರ ಬಿಡುಗಡೆ ಮಾಡಿದೆ. ಅದರಲ್ಲಿ ಸಾಖರೆ ಅವರ ಹೆಸರೂ ಸೇರಿದೆ. ಸಿವಿಲ್ ಎಂಜಿನಿಯರ್ ನಾಗರಾಜ್ ತಿಗಡಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಮೊದಲ ಎರಡು ಪಟ್ಟಿಗಳ ಮೂಲಕ ಆ ಪಕ್ಷ 15 ಜನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿತ್ತು. ಸದ್ಯ 26 ಕ್ಷೇತ್ರಗಳಿಗೆ ಲೋಕಸತ್ತಾ ಸ್ಪರ್ಧಿಸಿದಂತಾಗಿದೆ.

`ಅನೈತಿಕ ರಾಜಕಾರಣಕ್ಕೆ ಮಂಗಳ ಹಾಡಿ, ಸ್ವಚ್ಛವಾದ ರಾಜಕೀಯ ವಾತಾವರಣವನ್ನು ರಾಜ್ಯದಲ್ಲಿ ಉಂಟುಮಾಡಲು ನಮ್ಮ ಪಕ್ಷಕ್ಕೆ ಜನತೆ ಬೆಂಬಲ ನೀಡಬೇಕು' ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಅಶ್ವಿನ್ ಮಹೇಶ್ ಕೋರಿದ್ದಾರೆ. `ಚುನಾವಣೆ ಆಗಮಿಸಿದ ಈ ಸಂದರ್ಭದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಾಟ ಭರದಿಂದ ಸಾಗಿದೆ. ತತ್ವ-ಸಿದ್ಧಾಂತಗಳಿಗೆ ಬೆಲೆಯೇ ಇಲ್ಲವಾಗಿದೆ. ಎಲ್ಲ ಪಕ್ಷಗಳಲ್ಲಿ ಇಂಥವರೇ ತುಂಬಿರುವಾಗ ಭಿನ್ನತೆ ಎಲ್ಲಿರುತ್ತದೆ' ಎಂದು ಅವರು ಪ್ರಶ್ನಿಸಿದ್ದಾರೆ.

ಜನ ತಮ್ಮ ಹಿತ ಕಾಯುವವರನ್ನು ಆಯ್ಕೆ ಮಾಡಬೇಕು ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಎಸ್. ಮುಕುಂದ್ ಮನವಿ ಮಾಡಿದರು.

ಪಕ್ಷದ ಬಸವನಗುಡಿ ಅಭ್ಯರ್ಥಿ ಶಾಂತಲಾ ದಾಮ್ಲೆ, `ಯಾರಾದರೂ ಬಂದು ನಮ್ಮ ವ್ಯವಸ್ಥೆಯನ್ನು ಸರಿಪಡಿಸುತ್ತಾರೆ ಎನ್ನುವ ಆಸೆಯಲ್ಲಿ ಇಷ್ಟು ದಿನ ಕಾಯ್ದಿದ್ದಾಯಿತು. ಎಲ್ಲಿಯವರೆಗೆ ನಾವು ಮುಂದೆ ಬರುವುದಿಲ್ಲವೋ ಅಲ್ಲಿಯವರೆಗೆ ಸುಧಾರಣೆ ಸಾಧ್ಯವಿಲ್ಲ ಎನ್ನುವ ಅರಿವು ಈಗಾಗಿದೆ. ನಾನು ಸ್ಪರ್ಧಿಸಿರುವುದಕ್ಕೆ ಬಹುತೇಕ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ' ಎಂದು ಹೇಳಿದರು.

ಲೋಕಸತ್ತಾ ಪಕ್ಷದ ಮೂರನೇ ಪಟ್ಟಿ ಇಂತಿದೆ:  ಸಿದ್ದಲಿಂಗ ಚಂದ್ರಣ್ಣ ಕೆರೂರ (ಜೇವರ್ಗಿ), ಎಸ್. ವೆಂಕಟೇಶಮೂರ್ತಿ (ಥಾಮಸ್ ಮ್ಯಾಥ್ಯೂ) (ಭದ್ರಾವತಿ), ಬಿ.ಡಿ. ನವೀನಕುಮಾರ್ (ಶೃಂಗೇರಿ), ದೀಪಕ್ ಮಾಲಗಾರ (ಬಸವಕಲ್ಯಾಣ), ನಾಗೇಶ್ ವಿಲಾಸ್ ಸಾಖರೆ (ಬೆಳಗಾವಿ ಉತ್ತರ), ನಾಗರಾಜ ಶಂಕರರಾವ್ ತಗಡಿ (ಹುಬ್ಬಳ್ಳಿ-ಧಾರವಾಡ ಪಶ್ಚಿಮ), ರೋಹಿತ್ ಪಟೇಲ್ (ಜಯನಗರ), ಸಿ.ಜಿ. ಮುರಳಿ (ಕೋಲಾರ), ಅಜಯ್ ಪಾಟೀಲ (ಭಾಲ್ಕಿ), ಬಿ.ಎಂ. ಮಧು (ಕಡೂರ), ಟಿ.ಆರ್. ಕೃಷ್ಣಪ್ಪ (ಸಾಗರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.