ಬೆಂಗಳೂರು: ಕೆಪಿಸಿಸಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತರ ಸಮಾವೇಶಕ್ಕೆ ಗೈರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಮತ್ತು ಶಾಸಕ ಎನ್.ಎ.ಹ್ಯಾರಿಸ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬ ಆಕ್ರೋಶವನ್ನೂ ವ್ಯಕ್ತಪಡಿಸಿದರು.
ವಾರ್ತಾ ಸಚಿವ ಆರ್.ರೋಷನ್ ಬೇಗ್ ಸೇರಿದಂತೆ ಬೆಂಗಳೂರಿನಿಂದ ಆಯ್ಕೆಯಾದ ಕಾಂಗ್ರೆಸ್ ಶಾಸಕರ ಪೈಕಿ ಹಲವರು ಸಮಾವೇಶಕ್ಕೆ ಗೈರಾಗಿದ್ದರು. ಈ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅಲ್ಪಸಂಖ್ಯಾತ ಮುಖಂಡರು, ಮುಸ್ಲಿಮರನ್ನು ಕೇವಲ ಮತ ಗಳಿಕೆ ದೃಷ್ಟಿಯಿಂದ ನೋಡಬಾರದು ಎಂದು ಎಚ್ಚರಿಕೆಯ ಧಾಟಿಯಲ್ಲಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೂಡ ಅಲ್ಪಸಂಖ್ಯಾತ ಮುಖಂಡರ ಆಕ್ಷೇಪಗಳಿಗೆ ದನಿಗೂಡಿಸಿದರು. ಮುಖ್ಯಮಂತ್ರಿಯವರ ಜೊತೆ ಈ ಬಗ್ಗೆ ಚರ್ಚೆ ನಡೆಸುವ ಭರವಸೆಯನ್ನೂ ನೀಡಿದರು.
‘ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಮತಗಳು ಒಗ್ಗೂಡಿರುವುದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ವಿಷಯ ಸಿದ್ದರಾಮಯ್ಯ ಅವರಿಗೂ ಗೊತ್ತು. ಎಷ್ಟೇ ಕಾರ್ಯದ ಒತ್ತಡ ಇದ್ದರೂ ಅವರು ಇಲ್ಲಿಗೆ ಬರಬೇಕಿತ್ತು. ಮುಸ್ಲಿಮರನ್ನು ಮತ ಗಳಿಕೆಗೆ ಸೀಮಿತವಾಗಿ ನೋಡಬೇಡಿ. ಕಾಳಜಿ ಮಾತಿಗೆ ಸೀಮಿತ ಆಗಬಾರದು’ ಎಂದು ಜಾಫರ್ ಷರೀಫ್ ಹೇಳಿದರು.
‘ಯುವ ಜನರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡುವುದರ ಹೆಸರಿನಲ್ಲಿ ದೀರ್ಘಕಾಲದಿಂದ ಜನರ ವಿಶ್ವಾಸ ಗಳಿಸಿರುವ ನಾಯಕರಿಗೆ ಲೋಕಸಭಾ ಚುನಾವಣೆ ಟಿಕೆಟ್ ನಿರಾಕರಿಸಬಾರದು. ಹಿರಿಯ ನಾಯಕರು ಗಳಿಸಿರುವ ಜನರ ವಿಶ್ವಾಸಕ್ಕೆ ಬೆಲೆ ನೀಡಬೇಕು. ಲೋಕಸಭೆಗೆ ಆಯ್ಕೆಯಾಗುವ ಕಾಂಗ್ರೆಸ್ ಸಂಸದರು ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಮತ್ತಿತರರ ಮಾತಿನ ಬಾಣಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಹೊಂದಿರಬೇಕು ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.
ಹ್ಯಾರಿಸ್ ಮಾತನಾಡಿ, ‘ಮುಖ್ಯಮಂತ್ರಿಯವರು ₨ 1.38 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಶೇಕಡ 1ರಷ್ಟು ಕೂಡ ಪಾಲು ನೀಡಿಲ್ಲ. ಈ ಅಸಮತೋಲನವನ್ನು ತಕ್ಷಣವೇ ಸರಿಪಡಿಸಬೇಕು. ಅಲ್ಪಸಂಖ್ಯಾತರಿಗೆ ಶೇ 15ರಷ್ಟು ಅನುದಾನ ನೀಡಬೇಕು’ ಎಂದರು.
ಪರಮೇಶ್ವರ್ ಅಚ್ಚರಿ: ‘ಮುಖ್ಯಮಂತ್ರಿಯವರು ಒಂಬತ್ತನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಅವರು ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಶೇ 1ರಷ್ಟು ಅನುದಾನ ಕೂಡ ನೀಡಿಲ್ಲ ಎಂಬ ಮಾಹಿತಿ ಕೇಳಿ ನನಗೆ ಆಶ್ಚರ್ಯವಾಗುತ್ತದೆ. ಈ ಬಗ್ಗೆ ಅವರ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಮೋದಿ ಪ್ರಚಾರದ ಲೆಕ್ಕ ಕೊಡುತ್ತಾರಾ?
‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಟಿ.ವಿ ಮೂಲಕ ನಡೆಸುತ್ತಿರುವ ಪ್ರಚಾರ ಹಾಗೂ ಜಾಹೀರಾತುಗಳಿಗೆ ಮಾಡುತ್ತಿರುವ ವೆಚ್ಚದ ಕುರಿತು ಲೆಕ್ಕ ಕೊಡುತ್ತಾರೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
‘ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರ ಕಾರ್ಯಕ್ರಮಗಳ ಲೆಕ್ಕ ನೀಡಲು ಕಾಂಗ್ರೆಸ್ ಸಿದ್ಧವಿದೆ. ಆದರೆ ಬಿಜೆಪಿ ಲೆಕ್ಕವನ್ನು ಬಹಿರಂಗಪಡಿಸಲು ಸಿದ್ಧವಿದೆಯೇ’ ಎಂದು ಸವಾಲು ಹಾಕಿದರು.
‘ಮೋದಿ ಅವರು ರಾಜ್ಯಕ್ಕೆ ಬಂದಾಗ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇದೆಯೇ?’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.