ADVERTISEMENT

ಸಿಗದ ಸಂಭಾವನೆ ಕಲಾವಿದರ ಅಳಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST


ಬೆಂಗಳೂರು: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಪ್ರಧಾನ ವೇದಿಕೆಗೆ ಕರೆದುಕೊಂಡು ಬಂದ ಜಾನಪದ ತಂಡಗಳ ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾವಿದರೊಬ್ಬರು ತಮಗೆ ಸಲ್ಲಬೇಕಾದ ಸಂಭಾವನೆ ಸಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ಎಂ. ಯಲ್ಲಪ್ಪ ಭಾಗವತ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಅವರು ಸೂಚಿಸಿದ ಕಾರಣ ನಾನು 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಜನಪದ ವೇಷತೊಟ್ಟು ಭಾಗವಹಿಸಿದ್ದೆ. ಇದು ನನ್ನ ಕಸುಬು ಕೂಡಾ ಹೌದು.’ ‘ಮೆರವಣಿಗೆಯಲ್ಲಿ ಕಲಾವಿದನಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಡಿ. ಮಂಜುನಾಥ್ ಅವರೇ ಕಸಾಪದ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು’ ಎಂದರು.‘ಆದರೆ ನನಗೆ ಇನ್ನೂ ಯಾವುದೇ ಸಂಭಾವನೆ ನೀಡಿಲ್ಲ. ನಾನು ವಾಪಸ್ ಊರಿಗೆ ತೆರಳಲೂ ಹಣವಿಲ್ಲದಂತಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘15 ದಿನಗಳ ಹಿಂದೆ ನಾನು ನಲ್ಲೂರು ಪ್ರಸಾದ್‌ರನ್ನು ನೋಡಲು ಬಂದಿದ್ದೆ. ಆದರೆ ಆಗ ಅವರು ಭೇಟಿ ಆಗಿರಲಿಲ್ಲ. ಅವರಿಗೆ ನಾನು ದೂರವಾಣಿ ಕರೆ ಮಾಡಿ ಮಾತನಾಡಿದಾಗ ‘ಬನ್ನಿ, ಮೆರವಣಿಗೆಯಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿ ಎಂದು ಹೇಳಿದ್ದರು’ ಎಂದು ಭಾಗವತ ಅವರು ತಿಳಿಸಿದರು.ಈಗ ನಾನು ಅವರಲ್ಲಿ ಸಂಭಾವನೆ ಕೇಳಿದರೆ ‘ಎಷ್ಟೋ ಜನ ಬರ್ತಾರೆ, ಎಲ್ಲರಿಗೂ ಸಂಭಾವನೆ ಕೊಡಲಿಕ್ಕೆ ಆಗುತ್ತದೆಯಾ’ ಎಂದು ನನ್ನನ್ನೇ ಪ್ರಶ್ನಿಸುತ್ತಾರೆ ಎಂದು ಭಾಗವತ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.