ADVERTISEMENT

ಸಿನಿಮಾ ರಂಗಕ್ಕೆ ಹೆಚ್ಚಿನ ಆದ್ಯತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 20:15 IST
Last Updated 24 ಫೆಬ್ರುವರಿ 2011, 20:15 IST

ಬೆಂಗಳೂರು: 2011-12ನೇ ಸಾಲಿನ ಬಜೆಟ್‌ನಲ್ಲಿ ಸಿನಿಮಾ ರಂಗಕ್ಕೂ ಆದ್ಯತೆ ದೊರೆತಿದೆ. ಸಹಾಯಧನ ನೀಡಲಾಗುವ ಕನ್ನಡ ಚಿತ್ರಗಳ ಸಂಖ್ಯೆಯನ್ನು 50ರಿಂದ 75ಕ್ಕೆ ಹೆಚ್ಚಿಸಲಾಗಿದೆ.

ಹಾಸ್ಯನಟ ನರಸಿಂಹರಾಜು ಅವರ ನೆನಪಿನಲ್ಲಿ ಕಲಾಮಂದಿರ ನಿರ್ಮಾಣಕ್ಕೆ ರೂ 1 ಕೋಟಿ ಮೀಸಲಿಡಲಾಗಿದೆ.  ಕಂಠೀರವ ಸ್ಟುಡಿಯೋ ಅಭಿವೃದ್ಧಿಗೆ ರೂ 5 ಕೋಟಿ ಮೀಸಲು. ಕನ್ನಡ ಚಲನಚಿತ್ರ ವಿತರಣಾ ಸಂಸ್ಥೆಗಳಿಗೆ  ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಚಲನಚಿತ್ರಗಳ ಗುತ್ತಿಗೆ ಹಾಗೂ ಹಕ್ಕುಸ್ವಾಮ್ಯ ಹಸ್ತಾಂತರಿಸಲು ತೆರಿಗೆ ವಿನಾಯಿತಿ ನೀಡಲಾಗಿದೆ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಲು ರೂ 5 ಕೋಟಿ ಮೀಸಲು ಇಡಲಾಗಿದೆ.

ಸ್ವಾಗತ: ಕನ್ನಡ ಚಲನಚಿತ್ರ ರಂಗದ ಬೆಳವಣಿಗೆ ಬಜೆಟ್ ಪೂರಕವಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್  ತಿಳಿಸಿದ್ದಾರೆ.

ಭೂ ಪರಿವರ್ತನೆ ಸುಲಭ: ಭೂ ಸ್ವಾಧೀನಕ್ಕೆ ರೈತರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರ್ಕಾರ ಯಾವುದೇ ಉದ್ದೇಶದ ಸುಲಭವಾಗಿ ಭೂಮಿ ದೊರಕುವಂತೆ ಮಾಡಲು ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಿದೆ. ಇದರಿಂದಾಗಿ 3 ತಿಂಗಳ ಒಳಗೆ ವಿವಿಧ ಚಟುವಟಿಕೆಗಳಿಗೆ ಭೂಮಿ ಪರಿವರ್ತಿಸಲು ಸಾಧ್ಯವಾಗಲಿದೆ.

2011-12ನೇ ಸಾಲಿನ ಕೃಷಿ ಬಜೆಟ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಅಲ್ಲದೆ ಭೂಮಿ ಲಭ್ಯತೆ, ಮಾರಾಟ, ಪರಿವರ್ತನೆ ಮತ್ತಿತರ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ದೃಷ್ಟಿಯಿಂದ 1961ರ ಭೂ ಸುಧಾರಣಾ ಕಾಯ್ದೆ ಸೆಕ್ಷನ್ 79ಎ, 79ಬಿ ಮತ್ತು 109ಕ್ಕೆ ಸೂಕ್ತ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT