ADVERTISEMENT

ಸೌರಭ ಸಂಭ್ರಮದ 100 ಗಂಟೆಗಳ ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಬೆಂಗಳೂರು: `ಸಂಸ್ಥೆಯ ನೂರು ಮಾಸದ ಅಂಗವಾಗಿ ನವೆಂಬರ್ 7 ರಿಂದ 11 ವರೆಗೆ ಐದು ದಿನಗಳವರೆಗೆ  `ಸಂಭ್ರಮ 100~ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ~ ಎಂದು ಸಂಭ್ರಮ ಸೌರಭದ ಸಂಸ್ಥಾಪಕ ಅಧ್ಯಕ್ಷ ಸಂಜೀವ ಕುಲಕರ್ಣಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕರ್ನಾಟಕದಲ್ಲಿ ಪ್ರಥಮ ಬಾರಿಗೆ 100 ಗಂಟೆಗಳ ಕಲೆ ಸಂಸ್ಕೃತಿ ಕಾರ್ಯಕ್ರಮಗಳು  ನಡೆಯಲಿದ್ದು, ಇವುಗಳಲ್ಲಿ ಸಂಗೀತ, ನೃತ್ಯ, ನಾಟಕ, ರೂಪಕ, ವಾದ್ಯವಾದನ, ಜಾನಪದ, ಯಕ್ಷಗಾನ, ಕಥಾಕೀರ್ತನ  ಸೇರಿದಂತೆ ಕನ್ನಡದ ಎಲ್ಲ ರೀತಿಯ ಕಲಾ ಪ್ರಕಾರಗಳು ಒಳಗೊಂಡಿರುತ್ತವೆ. ಜನಪ್ರಿಯ ಹಾಗೂ ವೃತ್ತಿಪರ ಕಲಾವಿದರು ಒಂದೇ ವೇದಿಕೆಯ ಮೇಲೆ ಬೇರೆ ಬೇರೆ ಸಮಯದಲ್ಲಿ  ಕಾರ್ಯಕ್ರಮ ನೀಡಲಿದ್ದು, ಇದರಲ್ಲಿ ಅನೇಕ ಪ್ರಥಮ ಪ್ರಯೋಗಗಳು ಕೂಡ ನಡೆಯಲಿವೆ~ ಎಂದರು.

`ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಗಾಯಕಿ ಸಂಗೀತಾ ಕಟ್ಟಿ, ನೃತ್ಯಕಾರರಾದ ರಾಜೇಂದ್ರ ಹಾಗೂ ನಿರುಪಮಾ ರಾಜೇಂದ್ರ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ರಂಗಭೂಮಿ ನಟ  ಮಾಸ್ಟರ್ ಹಿರಣ್ಯಯ್ಯ ಪ್ರದರ್ಶನ ನೀಡುವರು~ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮಹಾ ಪ್ರಬಂಧಕರಾದ ಭಾಗ್ಯ ಸಂಜೀವ ಕುಲಕರ್ಣಿ, ಸಂಭ್ರಮ 100ರ ಪ್ರಧಾನ ಸಂಚಾಲಕರಾದ ವೈ.ಆರ್.ಪ್ರಾಣೇಶ್, ಶಿಲ್ಪಾ ಪ್ರಾಣೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.