ಬೆಂಗಳೂರು: `ದೇಶದಲ್ಲಿ ಶೇ 8ರಷ್ಟು ಸಂಘಟಿತ ಕಾರ್ಮಿಕರಿದ್ದು, ಉಳಿದ ಶೇ 92 ರಷ್ಟು ಮಂದಿ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಈ ವಲಯವು ಪಿಂಚಣಿ, ಇಎಸ್‌ಐ ಸೇರಿದಂತೆ ಇತರೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ವಿಷಾದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸುರಕ್ಷತಾ ಸಮಿತಿ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಹಾಗೂ ಆರೋಗ್ಯ ಮತ್ತು ಕೆಲಸದ ಪರಿಸರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣಉದ್ಘಾಟಿಸಿ ಅವರು ಮಾತನಾಡಿದರು.
`ರಾಸಾಯಾನಿಕ ಮತ್ತು ಸ್ಟೀಲ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು. ಕೆಲವೊಮ್ಮೆ ಮಾಲೀಕರು ಈ ಪರಿಕರಗಳನ್ನು ದುಬಾರಿಯೆಂದು ಕಾರ್ಮಿಕರ ಆರೋಗ್ಯವನ್ನು ನಿರ್ಲಕ್ಷ್ಯಿಸಬಾರದು~ ಎಂದು ಸಲಹೆ ನೀಡಿದ ಅವರು, ` ಕಾರ್ಮಿಕರ ಕಾರ್ಯದಕ್ಷತೆಯಿಂದ ಮಾಲೀಕರು ಮತ್ತು ಕಂಪೆನಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು~ ಎಂದು ಒತ್ತಾಯಿಸಿದರು.
ಇಎಸ್‌ಐ ನಿರ್ದೇಶಕ ರಹೀಂ ಉನ್ನಿಸಾ, ರಾಷ್ಟ್ರೀಯ ಸುರಕ್ಷತಾ ಪರಿಷತ್ ಅಧ್ಯಕ್ಷ ಎ.ಎಸ್.ಲಕ್ಷ್ಮಣ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಿ.ಎಸ್.ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.