ADVERTISEMENT

ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದವ ಸೆರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:23 IST
Last Updated 1 ಮಾರ್ಚ್ 2018, 19:23 IST

ಬೆಂಗಳೂರು: ಪಕ್ಕದ ಮನೆಯ ಮಹಿಳೆಯ ಸ್ನಾನದ ದೃಶ್ಯ ಸೆರೆ ಹಿಡಿಯುವುದಕ್ಕಾಗಿ, ಅವರ ಮನೆಯ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಆರೋ
ಪದಡಿ ಜೀವನ್‌ ಸೇಠ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಾರಾಟ ಪ್ರತಿನಿಧಿಯಾಗಿರುವ ಆತ ಸಾರ್ವಭೌಮನಗರದಲ್ಲಿ ಪತ್ನಿ ಹಾಗೂ ಮಗುವಿನ ಜತೆ ವಾಸವಿದ್ದ. ಆತನ ಮನೆಯ ಪಕ್ಕವೇ ಕುಟುಂಬವೊಂದು ವಾಸವಿದೆ. ಅವರ ಮನೆಯಲ್ಲೇ ಕ್ಯಾಮೆರಾ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ಸ್ನಾನ ಮಾಡುತ್ತಿದ್ದ ಮಹಿಳೆಗೆ ಕಿಟಕಿಯಲ್ಲಿದ್ದ ಕ್ಯಾಮೆರಾ ಕಂಡಿತ್ತು. ಅದರ ಸಮೇತವಾಗಿ ಮಹಿಳೆಯು ದೂರು ನೀಡಿದ್ದರು. ಜೀವನ್‌ ಸೇರಿದಂತೆ ಅಕ್ಕ–ಪಕ್ಕದಲ್ಲಿ ವಾಸವಿರುವ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಅವಾಗಲೇ ಜೀವನ್‌  ತಪ್ಪೊಪ್ಪಿಕೊಂಡ’ ಎಂದರು.

ADVERTISEMENT

‘ಅಲ್ಲಿದ್ದುದ್ದು ಕಾರಿನ ರಿವರ್ಸ್‌ ಕ್ಯಾಮೆರಾ ಎಂಬುದು ಗೊತ್ತಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಯಾವ್ಯಾವ ದೃಶ್ಯಗಳು ಇವೆ ಎಂಬುದು ವರದಿ ಬಂದ ಬಳಿಕವೇ ಗೊತ್ತಾಗಲಿದೆ. ಲೈಂಗಿಕ ದೌರ್ಜನ್ಯ, ಮಹಿಳೆ ಘನತೆಗೆ ಧಕ್ಕೆ ತಂದ ಮತ್ತು ಅತಿಕ್ರಮ ಪ್ರವೇಶ ಆರೋಪದಡಿ ಜೀವನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಪಕ್ಕದ ಮನೆಯ ಮಹಿಳೆ ಸುಂದರವಾಗಿದ್ದಳು. ಹೀಗಾಗಿ, ಕ್ಯಾಮೆರಾ ಇಟ್ಟಿದ್ದೆ. ಅದನ್ನು ಬಿಟ್ಟು ಬೇರೆಲ್ಲೂ ಅಂಥ ಕೆಲಸ ಮಾಡಿಲ್ಲ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.