ADVERTISEMENT

ಹಗಲಿಡೀ ಕಣ್ಣೀರು ಸುರಿಸುವವರು ರಾತ್ರಿ ನಾಪತ್ತೆ!

ಈಜಿಪುರದ ಗೋಜಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:04 IST
Last Updated 5 ಏಪ್ರಿಲ್ 2013, 19:04 IST

ಬೆಂಗಳೂರು: ಅವಶೇಷದ ರೂಪದಲ್ಲಿ ಅಳಿದುಳಿದಿರುವ ಪುಟ್ಟ ಮನೆಗಳ ಎದುರು ಹಗಲಿಡೀ ಮನ ಕರಗುವಂತೆ ಕಣ್ಣೀರು ಸುರಿಸುತ್ತಾರೆ. ಕತ್ತಲು ಏರುತ್ತಿದ್ದಂತೆ ಆ ಸ್ಥಳದಿಂದ ನಾಪತ್ತೆಯಾಗುತ್ತಾರೆ. ಮರುದಿನ ಮತ್ತೆ ಅದೇ `ದೃಶ್ಯ'!

ಈಜಿಪುರ ಬಳಿಯ ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಬಳಿ ನಿತ್ಯ ಕಂಡುಬರುತ್ತಿರುವ ದೃಶ್ಯ ಇದು. ಕಳೆದ ಒಂದೂವರೆ ತಿಂಗಳಿಂದ ಇಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡಿರುವವರ ಪ್ರತಿನಿತ್ಯದ ಕಾಯಕವೂ ಹೌದು ಎನ್ನುವ ಆಪಾದನೆ ದಟ್ಟವಾಗಿ ಕೇಳುತ್ತಿದೆ.

`ವಸತಿ ಸಮುಚ್ಚಯದ ಸುತ್ತಲೂ ಶೆಡ್‌ಗಳನ್ನು ಹಾಕಿಕೊಂಡಿರುವರು ನಿರಾಶ್ರಿತರಲ್ಲ. ಕೆಲವರು ಬಾಡಿಗೆ ಮನೆಯನ್ನು ಹೊಂದಿದ್ದರೆ, ಮತ್ತೆ ಕೆಲವರು ಸ್ವಂತ ಮನೆಗಳನ್ನೇ ಹೊಂದಿದ್ದಾರೆ. ಹಕ್ಕುಪತ್ರವಿಲ್ಲದಿದ್ದರೂ ಮನೆಗಳನ್ನು ಪಡೆಯಲು ಶೆಡ್ ಹಾಕಿಕೊಂಡಿದ್ದಾರೆ. ಆದರೆ, ಪ್ರತಿನಿತ್ಯ ಬೆಳಿಗ್ಗೆ ಆರು ಗಂಟೆಗೆ ಶೆಡ್‌ಗಳ ಬಳಿ ಬರುವ ಜನ, ರಾತ್ರಿ 10 ಗಂಟೆಗೆ ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ ಎಂಬ ಆರೋಪ ವಸತಿ ಸಮುಚ್ಚಯದ ನೈಜ ನಿವಾಸಿಗಳಿಂದಲೇ ಕೇಳಿ ಬಂದಿದೆ.

ಹೀಗಾಗಿ, ಒಂದು ನಡುರಾತ್ರಿ `ಪ್ರಜಾವಾಣಿ'  ಪ್ರತಿನಿಧಿಗಳು ಇಡಬ್ಲ್ಯೂಎಸ್ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದಾಗ, ಅಲ್ಲಿದ್ದ 20 ಶೆಡ್‌ಗಳಲ್ಲಿ ಸುಮಾರು ಒಂಬತ್ತು ಶೆಡ್‌ಗಳು ಖಾಲಿ ಇದ್ದವು. ಉಳಿದ ಶೆಡ್‌ಗಳಲ್ಲಿ ಯುವಕರು ಆಟವಾಡುತ್ತಾ ಕುಳಿತಿದ್ದರು. ನಾಯಿಗಳು ಕೂಗಿದ ಶಬ್ದ ಕೇಳಿ ಮನೆಯಿಂದ ಹೊರಬಂದ ಕೆಲ ನಿವಾಸಿಗಳು ಸಮೀಪವೇ ಇದ್ದ ಶೆಡ್‌ನಲ್ಲಿ ಸೇರಿಕೊಂಡರು. ಶಾಹಿನಿ ಎಂಬ ಮಹಿಳೆ ಟಾರ್ಪಾಲ್ ಮತ್ತು ಹೊದಿಕೆ ತಂದುಕೊಡುವಂತೆ ಕೇಳಿದರು.

ಇದೇ ವೇಳೆ ಶೆಡ್‌ನಲ್ಲಿದ್ದ ಅಲ್ಲಮ್ಮ ಎಂಬ ವೃದ್ಧೆ, `ನನ್ನ ಮಗ, ಸೊಸೆ ಹಾಗೂ ಮೊಮ್ಮಕ್ಕಳು ತಮಿಳುನಾಡಿಗೆ ಹೋಗಿದ್ದು, ಸದ್ಯ ನಾನೊಬ್ಬಳೇ ಇಲ್ಲಿದ್ದೇನೆ' ಎಂದರು. ಆದರೆ, ಅಲ್ಲಿನ ಮೂಲ ನಿವಾಸಿಯೊಬ್ಬರು, `ಅಲ್ಲಮ್ಮ ಅವರ ಮಗ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾನೆ. ಎಲ್ಲರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಮ್ಮ ಮಾತ್ರ ನಿತ್ಯ ಶೆಡ್‌ಗೆ ಬಂದು ಮಲಗುತ್ತಿದ್ದಾರೆ' ಎಂದು ಬಹಿರಂಗಪಡಿಸಿದರು.

`ಶೆಡ್ ತೆರವುಗೊಳಿಸಿದ ದಿನದಿಂದ (ಜ.18) ಕೆಲವರು ವಸತಿ ಸಮುಚ್ಚಯದ ಸುತ್ತಮುತ್ತಲ ಸ್ಥಳಗಳಲ್ಲಿ ಶೆಡ್ ಹಾಕಿಕೊಂಡಿದ್ದಾರೆ. ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ), ಕೆಲ ಸಂಘಟನೆಗಳು ಅವರಿಗೆ ಹೊದಿಕೆ, ಬಟ್ಟೆ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಿಕೊಟ್ಟಿವೆ. ಅಲ್ಲದೇ ನಿತ್ಯ ಇಸ್ಕಾನ್ ಮತ್ತು ಸ್ಥಳೀಯ ಸರ್ಕಾರಿ ಶಾಲೆಯಿಂದ ಊಟ ಬರುತ್ತಿದೆ. ಈ ಪ್ರದೇಶದಲ್ಲಿ ಓಡಾಡುವ ವಿದೇಶಿಯರೂ ಸಹ ಅನುಕಂಪದಿಂದ ಹಣ ಕೊಟ್ಟು ಹೋಗುತ್ತಿದ್ದಾರೆ. ಆದರೆ, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಶೆಡ್‌ನಲ್ಲಿರುವ ಈ ಅತಿಥಿಗಳು, ರಾತ್ರಿ ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಾರೆ' ಎಂದು ಅಲ್ಲಿನ ನಿವಾಸಿ ಕಾರ್ತಿಕ್ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

`ವೈಲೆಟ್ ಎಂಬ ವೃದ್ಧೆ ಇಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡಿದ್ದಾರೆ. ಅಂಬೇಡ್ಕರ್‌ನಗರದಲ್ಲಿ ಅವರ ಸ್ವಂತ ಮನೆ ಇದೆ. ಆ ಮನೆಯಲ್ಲಿ ಮಗ ಮತ್ತು ಸೊಸೆ ಇದ್ದಾರೆ. ವೃದ್ಧೆ ಕೂಡ ರಾತ್ರಿ ವೇಳೆ ಮನೆಗೆ ಹೋಗುತ್ತಾರೆ. ಇವರು ಮಾತ್ರವಲ್ಲ, ಇಲ್ಲಿರುವ ಬಹುತೇಕ ಮಂದಿ ತಮ್ಮ ಸ್ವಂತ ಮನೆಯ ಮುಂದೆಯೇ ಶೆಡ್ ಹಾಕಿಕೊಂಡಿದ್ದಾರೆ' ಎಂದು ಹೇಳಿದರು.

`ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಬಿಬಿಎಂಪಿ ಪೊಲೀಸರ ರಕ್ಷಣೆ ಕೇಳಿತ್ತು. ಅಂತೆಯೇ ನಮ್ಮ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆಸಿ ಶೆಡ್ ತೆರವುಗೊಳಿಸಲಾಯಿತು. ಈಗ ಕೆಲವರು ಪಾದಚಾರಿ ಮಾರ್ಗದಲ್ಲಿ ಶೆಡ್‌ಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ. ಆ ಶೆಡ್‌ಗಳನ್ನು ತೆರವುಗೊಳಿಸುವ ಅಧಿಕಾರ ಪೊಲೀಸರಿಗೆ ಇಲ್ಲ.

ಪಾದಚಾರಿ ಮಾರ್ಗದಲ್ಲಿ ಶೆಡ್ ಹಾಕಿರುವುದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಬಿಬಿಎಂಪಿಗೆ ದೂರು ನೀಡಿದರೆ ಪಾಲಿಕೆ ಶೆಡ್‌ಗಳನ್ನು ತೆರವುಗೊಳಿಸಬಹುದು. ಪೊಲೀಸರು ಜಾಗ ಖಾಲಿ ಮಾಡುವಂತೆ ಹೇಳಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ' ಎಂದು ಪೊಲೀಸರು ತಿಳಿಸಿದರು.

ಹೊದಿಕೆ ಅರ್ಧ ಬೆಲೆಗೆ ಮಾರಾಟ
ಶೆಡ್‌ಗಳನ್ನು ಹಾಕಿಕೊಂಡಿರುವವರು ಯಾರು ಎಂಬುದನ್ನು ಅರಿಯದೆ ಎನ್‌ಜಿಒಗಳು ಅವರಿಗೆ ಹೊದಿಕೆ ಮತ್ತು ಬಟ್ಟೆಗಳನ್ನು ಕೊಡುತ್ತಿದ್ದಾರೆ. ಆದರೆ, ಅವು ನೀಲಸಂದ್ರದಲ್ಲಿ ಅರ್ಧಬೆಲೆಗೆ ಮಾರಾಟವಾಗುತ್ತಿವೆ ಎಂಬ ಸತ್ಯ ಅವರಿಗೆ ಗೊತ್ತಿಲ್ಲ. ಇಲ್ಲಿದ್ದ ನಿಜವಾದ ಕೊಳೆಗೇರಿ ನಿವಾಸಿಗಳು ನಗರದ ವಿವಿಧೆಡೆ ಮನೆ ಬಾಡಿಗೆ ಪಡೆದು ವಾಸವಾಗಿದ್ದಾರೆ. ಈಗಿರುವವರು ಇಲ್ಲಿನ ಮೂಲ ನಿವಾಸಿಗಳಲ್ಲ.
-ಲೂಯಿಸ್, ಈಜಿಪುರ ಕೊಳೆಗೇರಿ ನಿವಾಸಿಗಳ
ಹೋರಾಟ ಸಮಿತಿ ಅಧ್ಯಕ್ಷ

ಅಪರಾಧಗಳು ಕಡಿಮೆಯಾಗಿವೆ

`ಇತ್ತೀಚೆಗೆ ಪರಿಶೀಲಿಸಿದ ಅಂಕಿ ಅಂಶಗಳ ಪ್ರಕಾರ ವಿವಿಧ ಅಪರಾಧ ಪ್ರಕರಣಗಳಿಗೆ ಬೇಕಾದ 29 ಮಂದಿ ಆರೋಪಿಗಳು ಹಾಗೂ ನಾಲ್ಕು ಮಂದಿ ರೌಡಿಗಳು ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲೇ ಇದ್ದರು. ಇಲ್ಲಿನ ಶೆಡ್‌ಗಳನ್ನು ತೆರವುಗೊಳಿಸಿದಾಗಿನಿಂದ ಅರ್ಧದಷ್ಟು ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ. ಅಲ್ಲದೇ, ಸಮೀಪದ ಕೋರಮಂಗಲ, ವಿವೇಕನಗರ, ಮಡಿವಾಳ ಠಾಣೆಗಳ ವ್ಯಾಪ್ತಿಯಲ್ಲೂ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈಗಿರುವ ಕೆಲವೇ ಶೆಡ್‌ಗಳಲ್ಲಿ ಕುಳಿತು ಕೆಲವರು ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ'.
- ಎಸ್. ಸುಧೀರ್, ಆಡುಗೋಡಿ ಇನ್‌ಸ್ಪೆಕ್ಟರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.