ADVERTISEMENT

ಹಣ ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: ಕೆಂಗೇರಿ ಉಪನಗರದಲ್ಲಿರುವ ಕಾಫಿ ಡೇ ವ್ಯವಸ್ಥಾಪಕ ಅಭಿಲಾಷ್ ಎಂಬುವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಹಣ ದರೋಡೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಎಂಬತ್ತು ಅಡಿ ರಸ್ತೆಯಲ್ಲಿ ಕಾಫಿ ಡೇ ಇದೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಅಲ್ಲಿಗೆ ಬಂದ ಐದು ಮಂದಿ ತಿಂಡಿ ತಿಂದು ಕಾಫಿ ಕುಡಿದಿದ್ದಾರೆ. ಬೇರೆ ಗ್ರಾಹಕರೆಲ್ಲ ಅಲ್ಲಿಂದ ಹೋಗುವವರೆಗೂ ಕಾಯುತ್ತ ಕುಳಿತಿದ್ದ ದುಷ್ಕರ್ಮಿಗಳು ಬಿಲ್ ನೀಡಿದ ನಂತರ ತಿಂಡಿ ಸರಿಯಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಅಭಿಲಾಷ್ ಅವರ ಜತೆ ವಾಗ್ವಾದ ನಡೆಸಿದ ಅವರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಕ್ಯಾಶ್ ಬಾಕ್ಸ್‌ನಲ್ಲಿದ್ದ ಐದು ಸಾವಿರ ರೂಪಾಯಿ, ಅಭಿಲಾಷ್ ಅವರ ಮೊಬೈಲ್ ಫೋನ್ ಮತ್ತು ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆ ಮಾಡುವ ಉದ್ದೇಶದಿಂದಲೇ ಅವರು ಬಂದಿದ್ದರು ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಂಗೇರಿ ಪೊಲೀಸರು ಹೇಳಿದ್ದಾರೆ.

ಮಹಿಳೆ ಆತ್ಮಹತ್ಯೆ
ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಸಮೀಪದ ಬೃಂದಾವನ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ನಾರಾಯಣ್ ಎಂಬುವರ ಪುತ್ರಿ ಸುಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು. `ನನ್ನ ಸಾವಿಗೆ ಯಾರೂ ಕಾರಣ ಅಲ್ಲ~ ಎಂದು ಅವರು ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಷ್ಮಾ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ನಾಯಕ್ ಎಂಬುವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ವಿಜಯನಗರದಲ್ಲಿ ನೆಲೆಸಿದ್ದರು. ಸುಷ್ಮಾ ಅವರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ತವರು ಮನೆಗೆ ಬಂದಿದ್ದ ಸುಷ್ಮಾ ರಾತ್ರಿ ಊಟ ಮಾಡಿ ಕೊಠಡಿಗೆ ಹೋಗಿದ್ದರು. ಬೆಳಿಗ್ಗೆ ಅವರು ಹೊರಗೆ ಬಾರದ ಕಾರಣ ಅನುಮಾನಗೊಂಡ ಪೋಷಕರು ಒಳ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಹುಳಿಮಾವು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.