ADVERTISEMENT

ಹಣ ಲಪಟಾಯಿಸಲು ನಾಟಕ: ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 18:30 IST
Last Updated 10 ಫೆಬ್ರುವರಿ 2012, 18:30 IST

ಬೆಂಗಳೂರು: ಮಾಲೀಕನ 15 ಲಕ್ಷ ರೂಪಾಯಿ ಹಣವನ್ನು ಲಪಟಾಯಿಸಲು ದರೋಡೆಯ ನಾಟಕವಾಡಿದ ಯುವಕ ಮತ್ತು ಆತನ ಸ್ನೇಹಿತರನ್ನು ಮೈಕೊಲೇಔಟ್ ಪೊಲೀಸರು ಬಂಧಿಸಿದ್ದಾರೆ.ಒಡಿಶಾ ಮೂಲದ ಸುಜಿತ್ ಕುಮಾರ್ ಶರ್ಮಾ (24), ರವೀಂದ್ರ (25) ಮತ್ತು ಸಾಹು (25) ಬಂಧಿತರು.ಹಳೇ ಮದ್ರಾಸ್ ರಸ್ತೆಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಸಗಟು ವ್ಯಾಪಾರ ಅಂಗಡಿ ಇಟ್ಟುಕೊಂಡಿರುವ ಸುನಿಲ್ ಅಗರ್‌ವಾಲ್ ಎಂಬುವರ ಬಳಿ ಸುಜಿತ್ ಕೆಲಸ ಮಾಡುತ್ತಿದ್ದ.
 
ಸುನಿಲ್ ಬಿಳೇಕಹಳ್ಳಿ ಸಮೀಪದ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲಾಟ್ ಖರೀದಿಸಿದ್ದರು. ಆದ್ದರಿಂದ ಅಲ್ಲಿಗೆ ತೆರಳಿ 15 ಲಕ್ಷ ಕೊಟ್ಟು ಬರುವಂತೆ ಅವರು, ಸುಜಿತ್‌ಗೆ ಹಣ ಕೊಟ್ಟು ಕಳುಹಿಸಿದ್ದರು. ಹಣ ಲಪಟಾಯಿಸಲು ಸಂಚು ರೂಪಿಸಿದ ಆತ ದುಷ್ಕರ್ಮಿಗಳು ಹಲ್ಲೆ ನಡೆಸಿ ಹಣ ದರೋಡೆ ಮಾಡಿದರು ಎಂದು ಮಾಲೀಕರಿಗೆ ಹೇಳಿದ್ದ. ಇದರಿಂದ ಆತಂಕಗೊಂಡ ಸುನಿಲ್ ಠಾಣೆಗೆ ರಾತ್ರಿ ದೂರು ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

`ಸುಜಿತ್‌ನ ಎಡಗೈ ಮತ್ತು ಹೊಟ್ಟೆಯ ಭಾಗದಲ್ಲಿ ಇರಿತದ ಗಾಯಗಳಿದ್ದವು. ಯಾವುದೇ ವ್ಯಕ್ತಿಯ ಮೇಲೆ ಯಾರಾದರೂ ಹಲ್ಲೆ ನಡೆಸಲು ಮುಂದಾದರೆ ಆತ ತನ್ನ ಬಲಗೈ ಮೂಲಕ ಅದನ್ನು ತಡೆಯಲು ಯತ್ನಿಸುತ್ತಾನೆ. ಆದರೆ ಆತನ ಎಡಗೈಗೆ ಗಾಯವಾಗಿದ್ದನ್ನು ನೋಡಿ ಅನುಮಾನ ಬಂತು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ನೀಡಿದ ಉತ್ತರ ಗೊಂದಲಮಯಯಾಗಿತ್ತು.
 
ಸುಜಿತ್  ದರೋಡೆ ನಾಟಕವಾಡಿದ್ದನ್ನು ಒಪ್ಪಿಕೊಂಡ~ ಎಂದು ಮೈಕೊಲೇಔಟ್ ಇನ್‌ಸ್ಪೆಕ್ಟರ್ ಮೋಹನ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು. `ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಮತ್ತು ಸಾಹು ಅವರಿಗೆ ಹಣ ನೀಡಿದ್ದೇನೆ. ಅವರು  8 ಗಂಟೆಗೆ ಕೆ.ಆರ್.ಪುರದಿಂದ ರೈಲಿನಲ್ಲಿ ಒಡಿಶಾಗೆ ಹೋಗುತ್ತಿದ್ದಾರೆ ಎಂದು ಸುಜಿತ್ ಮಾಹಿತಿ ನೀಡಿದ. ರೈಲು ನಿಲ್ದಾಣಕ್ಕೆ ತೆರಳಿ ಅವರಿಬ್ಬರನ್ನೂ ಬಂಧಿಸಿ ಹಣ ವಶಪಡಿಸಿಕೊಳ್ಳಲಾಯಿತು~ ಎಂದು ಹೇಳಿದರು.
 

ಬಂದೂಕಿನಿಂದ  ಸಿಡಿಮದ್ದು ಹಾರಿಸಿದ ಬಾಲಕ
ಬೆಂಗಳೂರು: 
ಬ್ಯಾಂಕ್‌ನ ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್‌ನ ಬಂದೂಕಿನಿಂದ ಬಾಲಕನೊಬ್ಬ ಆಕಸ್ಮಿಕವಾಗಿ ಸಿಡಿ ಮದ್ದು (ಚೆರ‌್ರಿ) ಹಾರಿಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಜಯನಗರ ಒಂಬತ್ತನೇ ಬ್ಲಾಕ್‌ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬಿಟಿಎಂ ಲೇಔಟ್ ನಿವಾಸಿ ಅಬ್ದುಲ್ ರಾವುಫ್ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯನಗರ 28ನೇ ಅಡ್ಡರಸ್ತೆಯಲ್ಲಿರುವ ಶ್ಯಾಮರಾವ್ ವಿಠ್ಠಲ್ ಬ್ಯಾಂಕ್‌ನ ಎಟಿಎಂ ಘಟಕದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್ ಮುದ್ದಪ್ಪ ಅವರು ಸಂಜೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬ್ಯಾಂಕ್‌ನ ಪಕ್ಕದ ಮನೆಯ ಬಾಲಕನೊಬ್ಬ ಅವರ ಬಳಿ ಬಂದಿದ್ದ. ಮುದ್ದಪ್ಪನ ಬಳಿ ಇದ್ದ ಬಂದೂಕನ್ನು ನೋಡುತ್ತಿದ್ದ ಆ ಬಾಲಕ ಆಕಸ್ಮಿಕವಾಗಿ ಅದರ ಟ್ರಿಗರ್ ಒತ್ತಿದ್ದಾನೆ. ಬಂದೂಕಿನಿಂದ ಹಾರಿದ ಸಿಡಿ ಮದ್ದು, ಎಟಿಎಂ ಘಟಕದ ಮುಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಬ್ದುಲ್ ಅವರ ಕಿವಿಯ ಕೆಳಗಿನ ಭಾಗಕ್ಕೆ ತಗುಲಿದೆ ಎಂದು ತಿಲಕ್‌ನಗರ ಪೊಲೀಸರು ಹೇಳಿದ್ದಾರೆ.

ಬಂದೂಕಿನಿಂದ ಹಾರಿದ ಸಿಡಿ ಮದ್ದಿನ ಚೂರುಗಳು ಎಟಿಎಂ ಘಟಕದ ಬಳಿ ನಿಂತಿದ್ದ ಕಾರಿನ ಕಿಟಕಿ ಗಾಜಿಗೆ ತಗುಲಿವೆ. ಈ ಬಗ್ಗೆ ಕಾರಿನ ಮಾಲೀಕ ರಾಮ್‌ಪ್ರಸಾದ್ ಎಂಬುವರು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುದ್ದಪ್ಪ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೊಲೇಔಟ್ ಉಪ ವಿಭಾಗದ ಎಸಿಪಿ ಡಿ.ರಾಚಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT