ADVERTISEMENT

ಹಾಸ್ಟೆಲ್‌ಗೆ ಬಂದ ಕಳ್ಳನಿಗೆ ಥಳಿಸಿದ ಮಹಿಳೆಯರು

ಮೊಬೈಲ್ ಕದಿಯಲು ಹೋದ ಎಂಬಿಎ ಪದವೀಧರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:39 IST
Last Updated 8 ಜುಲೈ 2017, 19:39 IST
ಹಾಸ್ಟೆಲ್‌ಗೆ ಬಂದ ಕಳ್ಳನಿಗೆ ಥಳಿಸಿದ ಮಹಿಳೆಯರು
ಹಾಸ್ಟೆಲ್‌ಗೆ ಬಂದ ಕಳ್ಳನಿಗೆ ಥಳಿಸಿದ ಮಹಿಳೆಯರು   

ಬೆಂಗಳೂರು: ಪದ್ಮನಾಭನಗರದಲ್ಲಿರುವ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ (ಆರ್ಐಸಿಎಂ) ‘ವಸುಧಾ ಹಾಸ್ಟೆಲ್‌’ಗೆ ಕಳ್ಳತನ ಮಾಡಲು ನುಗ್ಗಿದ್ದ ಪವನ್ ಸಿಂಗ್ (29) ಎಂಬ ಎಂಬಿಎ ಪದವೀಧರನನ್ನು ಹಾಸ್ಟೆಲ್‌ನ ಮಹಿಳೆಯರೇ ಹಿಡಿದು ಬನಶಂಕರಿ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

ಸುಬ್ರಹ್ಮಣ್ಯಪುರದ ಪವನ್ ಸಿಂಗ್, ಜೂನ್ 1ರ ರಾತ್ರಿ 11 ಗಂಟೆ ಸುಮಾರಿಗೆ ಹಾಸ್ಟೆಲ್‌ಗೆ ನುಗ್ಗಿದ್ದ. ಕೋಣೆಯೊಂದಕ್ಕೆ ಹೋಗಿ ಬ್ಯಾಗ್‌ ಪರಿಶೀಲಿಸುತ್ತಿದ್ದಾಗ, ಮಹಿಳೆಯೊಬ್ಬರು ಆತನನ್ನು ನೋಡಿದ್ದರು. ಅವರು ಚೀರಿಕೊಳ್ಳುತ್ತಿದ್ದಂತೆಯೇ ಆರೋಪಿ ಶೌಚಾಲಯದೊಳಗೆ ಓಡಿದ್ದ.

ಚೀರಾಟ ಕೇಳಿ ತಮ್ಮ ಕೋಣೆಗಳಿಂದ ಹೊರ ಬಂದ ಮಹಿಳೆಯರು,  ಕೂಡಲೇ ಆರ್ಐಸಿಎಂ ನಿರ್ದೇಶಕ ಬಿ.ವಸಂತ್‌ ನಾಯಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (100) ಸುದ್ದಿ ಮುಟ್ಟಿಸಿದ್ದರು. ಈ ಹಂತದಲ್ಲಿ ಪವನ್, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಒಗ್ಗಟ್ಟು ಪ್ರದರ್ಶಿಸಿದ ಮಹಿಳೆಯರು, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.

ADVERTISEMENT

ಸ್ವಲ್ಪ ಸಮಯದಲ್ಲಿ ಹಾಸ್ಟೆಲ್ ಬಳಿ ತೆರಳಿದ ಹೊಯ್ಸಳ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ‘ಖರ್ಚಿಗೆ ಹಣ ಇರಲಿಲ್ಲ. ಹೀಗಾಗಿ, ಪರ್ಸ್, ಮೊಬೈಲ್‌ ಕದಿಯಲು ಹಾಸ್ಟೆಲ್‌ಗೆ ನುಗ್ಗಿದ್ದೆ. ಹಿಂದೆಯೂ 2–3 ಸಲ ಈ ಹಾಸ್ಟೆಲ್‌ನಲ್ಲಿ ಕಳ್ಳತನ ಮಾಡಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಬನಶಂಕರಿ ಪೊಲೀಸರು ತಿಳಿಸಿದರು.

‘ಆರ್ಐಸಿಎಂ ಕೇಂದ್ರದಲ್ಲಿ ಸಹಕಾರಿ ವಲಯದ ನೌಕರರಿಗೆ ವೃತ್ತಿಕೌಶಲ ತರಬೇತಿ ನೀಡಲಾಗುತ್ತದೆ.  ಇಲ್ಲಿಗೆ ಬರುವ ಮಹಿಳಾ ಅಭ್ಯರ್ಥಿಗಳಿಗೆ ಪಕ್ಕದ ವಸುಧಾ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆರೋಪಿಯು ಆ ಕಟ್ಟಡದ ಹಿಂಭಾಗದಲ್ಲಿರುವ ಗೋಡೆ ಜಿಗಿದು ಒಳಗೆ ಬಂದಿದ್ದ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಇಲ್ಲೇ ತರಬೇತಿ ಪಡೆದಿದ್ದ: ‘2016ರಲ್ಲಿ ಬ್ಯಾಂಕ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಪವನ್ ಸಿಂಗ್ ಕೂಡ ಆರ್ಐಸಿಎಂ ಕೇಂದ್ರದಲ್ಲೇ ತರಬೇತಿ ಪಡೆದಿದ್ದ. ಹೀಗಾಗಿ, ಕಟ್ಟಡದ ವಿನ್ಯಾಸ ಹಾಗೂ ಇಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಆತನಿಗೆ ಗೊತ್ತಿತ್ತು. ಕಳ್ಳತನದ ಉದ್ದೇಶದಿಂದ ರಾತ್ರಿ ವೇಳೆ ಮನೆ/ಕಟ್ಟಡಕ್ಕೆ ನುಗ್ಗಿದ ಆರೋಪಗಳಡಿ (ಐಪಿಸಿ 380, 457, 511) ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.