ADVERTISEMENT

ಹಿಂದೂ ಧರ್ಮದಲ್ಲಿ ಹೆಣ್ಣಿಗೆ ಅಸಮಾನತೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:50 IST
Last Updated 16 ಮಾರ್ಚ್ 2014, 19:50 IST

ಬೆಂಗಳೂರು: ‘ಹಿಂದೂ ಧರ್ಮದಲ್ಲಿ ಹೆಣ್ಣಿಗೆ ಇನ್ನೂ ಸಮಾನತೆ ಸಿಕ್ಕಿಲ್ಲ. ಹಿಂದೂ ಧರ್ಮದ ಚೌಕಟ್ಟಿನಲ್ಲಿ ಹೆಣ್ಣನ್ನು ಕೇವಲ ಸ್ತೋತ್ರಗಳ ಹೊಗಳಿಕೆಗಷ್ಟೇ ಸೀಮಿತಗೊಳಿಸಲಾಗಿದೆ’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ವಿಷಾದಿಸಿದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್‌ ಲಿಟರಸಿ ರಾಜಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಕೃಷ್ಣನ್‌ ಅವರು ಸಂಪಾದಿಸಿರುವ ‘ಪ್ರೊ.ಬಿ.ಎನ್‌.ಸಂಪತ್ಸ್‌ ಹಿಂದೂ ಲಾ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ವೇದ– ವೇದಾಂತಗಳಲ್ಲಿ ಹೆಣ್ಣು ಶ್ರೇಷ್ಠ ಎಂದು ಸ್ತೋತ್ರಗಳ ಮೂಲಕ ಹೊಗಳಲಾಗುತ್ತದೆ. ಆದರೆ, ಸ್ತೋತ್ರಗಳ ಆಶಯ ಅನುಷ್ಠಾನಕ್ಕೆ ಬಂದಿಲ್ಲ. ಹೆಣ್ಣು ವಿಧವೆ­ಯಾದರೆ ಆಕೆಯನ್ನು ನಿಕೃಷ್ಟವಾಗಿ ನೋಡುವ ಪದ್ಧತಿ ಇಂದಿಗೂ ಜೀವಂತವಾಗಿದೆ’ ಎಂದು ಅವರು ಹೇಳಿದರು.
‘ಸತಿ ಪದ್ಧತಿ ನಿರ್ಮೂಲನೆಗೆ ರಾಜಾರಾಮ್‌ ಮೋಹನ್‌ ರಾಯ್‌ ಶ್ರಮಿಸಿದರು. ಆದರೆ, ಹೆಣ್ಣನ್ನು ದ್ವಿತೀಯ ದರ್ಜೆ ಪ್ರಜೆಯಂತೆ ನೋಡುವ ಪರಿಪಾಠ ಇಂದಿಗೂ  ತಪ್ಪಿಲ್ಲ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಪ್ರೊ.ಬಿ.ಎನ್‌.ಸಂಪತ್‌ ಅವರ ‘ಹಿಂದೂ ಲಾ’ ಪುಸ್ತಕ ಹಿಂದೂ ಧರ್ಮದ ಕಾನೂನುಗಳ ಬಗ್ಗೆ ಬೆಳಕು ಚೆಲ್ಲು­ತ್ತದೆ. ಅವರ ಪುಸ್ತಕವನ್ನು ಸಂಪಾದಿಸಿ, ಪ್ರಕಟಿಸಿರುವ ಬಿ.ಎನ್‌.ಕೃಷ್ಣನ್‌ ಅವರ ಕಾರ್ಯ ಅಭಿ­ನಂದ­ನೀಯ’ ಎಂದು ನುಡಿದರು.

ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾ ಜೋಯಿಸ್‌ ಮಾತ­ನಾಡಿ, ‘ಬನಾರಸ್‌ ಹಿಂದೂ ವಿಶ್ವವಿದ್ಯಾ­ಲಯ­ದಲ್ಲಿ ಮೂರು ದಶಕಗಳ ಕಾಲ
ಕಾನೂನು ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ಎನ್‌.ಸಂಪತ್‌ ಅವರು ಹಿಂದೂ ಕಾನೂನು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ’ ಎಂದರು.
ಎರಡು ಸಂಪುಟಗಳಲ್ಲಿರುವ ಪುಸ್ತಕವನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್‌ ಲಿಟರಸಿ ಹೊರತಂದಿದೆ. ಬೆಲೆ ₨ 1200.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.