ADVERTISEMENT

ಹೆಚ್ಚುತ್ತಿರುವ ಜಾತಿ ಸಂಘರ್ಷದಿಂದ ಅಶಾಂತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:55 IST
Last Updated 16 ಫೆಬ್ರುವರಿ 2011, 19:55 IST

ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಜಾತಿ ಸಂಘರ್ಷ ಹೆಚ್ಚಾಗುತ್ತಿದೆ. ಮತಾಂತರ ಕೂಡ ತೀವ್ರವಾಗಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವುದು ಆತಂಕ ಮೂಡಿಸಿದೆ’ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಜಾತಿ, ಮತ, ಧರ್ಮದ ಕಾರಣಕ್ಕೆ ಉಂಟಾಗುವ ಸಂಘರ್ಷಗಳನ್ನು ನಿಯಂತ್ರಿಸಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ತರಳಬಾಳು ಮಠ ಸೇರಿದಂತೆ ಇತರ ಮಠಗಳು ಸರ್ವರಿಗೂ ಸಮಾನತೆ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಮತಾಂತರ ಚಟುವಟಿಕೆಗಳು ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ. ಇವುಗಳ ನಿರ್ಮೂಲನೆಗೆ ಎಲ್ಲರೂ ಹೋರಾಟ ನಡೆಸಬೇಕಿದೆ’ ಎಂದು ಅವರು ಹೇಳಿದರು.

‘ನಗರ ಜೀವನವು ಸಾಂಸ್ಕೃತಿಕ ಬದುಕನ್ನೇ ನಾಶಪಡಿಸುತ್ತಿದೆ. ಆದರೆ ಈ ರೀತಿಯ ಕಾರ್ಯಕ್ರಮಗಳು ಸಂಸ್ಕೃತಿ ಪ್ರಸಾರಕ್ಕೆ ಅನುಕೂಲಕರವಾಗಿವೆ. ಇತರೆ ಮಠಗಳು ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಧರ್ಮ, ಸಂಸ್ಕೃತಿಯ ಪ್ರಸಾರಕ್ಕೆ ಮುಂದಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ‘ಜಾತಿವಾದ, ಭ್ರಷ್ಟಾಚಾರವನ್ನು ನಿಯಂತ್ರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಎಲ್ಲರೂ ಆದರ್ಶ, ತತ್ವಗಳನ್ನು ಪಾಲಿಸುವಂತಾಗಬೇಕು. ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

‘ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮಾನವೀಯ ಮೌಲ್ಯಗಳ ಪಾಲನೆ ಬಗ್ಗೆ ತಿಳಿಸಿಕೊಡಬೇಕು’ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ‘ನಾಡಿನ ಸಂಸ್ಕೃತಿ ಮತ್ತು ಸಾಹಿತ್ಯ ಚಿಂತನೆ ಮನುಕುಲಕ್ಕೆ ಅಗತ್ಯವಿರುವ ವಿಚಾರಗಳನ್ನು ನೀಡುತ್ತದೆ. ಕಾಲಾನಂತರದಲ್ಲಿ ಮನುಷ್ಯ ಸುಸಂಸ್ಕೃತ ವಂಚಕನಾಗಿ ರೂಪುಗೊಂಡಿದ್ದಾನೆ. ಸಾಧಕರು, ಚಿಂತಕರು, ದಾರ್ಶನಿಕರು ಏನೆಲ್ಲಾ ಮಾರ್ಗದರ್ಶನ ನೀಡಿದರೂ ಆತನಲ್ಲಿ ಸುಧಾರಣೆ ಕಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತರಳಬಾಳು ಮಠವು ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಸಂವಿಧಾನದ ಉದ್ದೇಶವನ್ನು ಎತ್ತಿ ಹಿಡಿಯುತ್ತಿದೆ. ಆ ಮೂಲಕ ಸಮಾಜದಲ್ಲಿ ಸಮಾತನೆಯ ತತ್ವವನ್ನು ಪ್ರಸಾರ ಮಾಡುತ್ತಿದೆ’ ಎಂದರು.

ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್.ಟಿ. ರಮೇಶ್, ಸಂಸದ ಜನಾರ್ದನಸ್ವಾಮಿ, ಶಾಸಕ ಬಿ.ಪಿ. ಹರೀಶ್ ಇತರರು ಉಪಸ್ಥಿತರಿದ್ದರು. ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ‘ಜಂಗಮಕ್ಕಳಿವಿಲ್ಲ’ ಕುರಿತು ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.