ADVERTISEMENT

ಹೈಟೆಕ್ ವೇಶ್ಯಾವಾಟಿಕೆ ಜಾಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಬೆಂಗಳೂರು: ವಿಠಲ್ ಮಲ್ಯ ರಸ್ತೆಯಲ್ಲಿರುವ ಪಂಚತಾರ ಹೋಟೆಲ್ ಮೇಲೆ ಗುರುವಾರ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಚಿತ್ರನಟಿ ಯಮುನಾ ಸೇರಿದಂತೆ ಮೂರು ಮಂದಿಯನ್ನು ಬಂಧಿಸಿರುವ ನಗರ ಪೊಲೀಸರು ರಾಷ್ಟ್ರವ್ಯಾಪಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ವೇಣುಗೋಪಾಲ್ ಮತ್ತು ದಂಧೆಯ ರೂವಾರಿ ರಕ್ಷಿತ್ ಬಂಧಿತ ಆರೋಪಿಗಳು.

ಮೂರೂ ಮಂದಿಯನ್ನು ಪೊಲೀಸರು ಗುರುವಾರ ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಯಮುನಾ ಮತ್ತು ವೇಣುಗೋಪಾಲ್‌ನನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮನವಿಯ ಮೇರೆಗೆ ಸುರಕ್ಷಿತ್‌ನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಸುರಕ್ಷಿತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಕೆಲವು ನಟಿಯರು ಈ ದಂಧೆಯಲ್ಲಿದ್ದಾರೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಆರೋಪಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಇಂಟರ್‌ನೆಟ್‌ಗಳಲ್ಲಿ ಗ್ರಾಹಕರನ್ನು ಆಹ್ವಾನಿಸುತ್ತಿದ್ದ ಆತ ಆ ನಂತರ ಮೊಬೈಲ್ ಫೋನ್ ಮೂಲಕ ವ್ಯವಹಾರ ಕುದುರಿಸಿ ಪಂಚತಾರಾ ಹೋಟೆಲ್‌ಗಳಲ್ಲಿ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

‘ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮೂರು ತಿಂಗಳ ಹಿಂದೆ ಮಾಹಿತಿ ಸಿಕ್ಕಿತ್ತು. ನಂತರ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅಪರಾಧ ವಿಭಾಗಕ್ಕೆ ಸೂಚನೆ ನೀಡಿದ್ದೆ’ ಎಂದು ಬಿದರಿ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ತಿಳಿಸಿದರು. ‘ಈ ಜಾಲದ ಬಗ್ಗೆ ಬಗ್ಗೆ ಸಿಬ್ಬಂದಿ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಹೈಟೆಕ್ ಹೇಗೆ: ಆಧುನಿಕ ಸಂಪರ್ಕ ಸಾಧನಗಳನ್ನು ಬಳಸಿ ದುಬಾರಿ ವೆಚ್ಚದಲ್ಲಿ ನಡೆಯುವ ವೇಶ್ಯಾವಾಟಿಕೆಯನ್ನು ಹೈಟೆಕ್ ವೇಶ್ಯಾವಾಟಿಕೆ ಎನ್ನಲಾಗುತ್ತದೆ. ಚಲನಚಿತ್ರ ನಟಿಯರು, ಮಾಡೆಲ್‌ಗಳು ಇದರಲ್ಲಿ ಭಾಗವಹಿಸುವುದು ಇದರ ಪ್ರಮುಖ ಅಂಶ. ವೆಬ್‌ಸೈಟ್ ಮೂಲಕ ಗ್ರಾಹಕರನ್ನು ಆಹ್ವಾನಿಸಲಾಗುತ್ತದೆ. ಲಭ್ಯವಿರುವ ಹುಡುಗಿಯರ ಭಾವಚಿತ್ರ ಮತ್ತು ಸಂಪೂರ್ಣ ವಿವರ ಇದರಲ್ಲಿ ಇರುತ್ತದೆ. ವ್ಯಕ್ತಿಯೊಬ್ಬರ ದೂರವಾಣಿ ಸಂಖ್ಯೆಯನ್ನೂ ವೆಬ್‌ಸೈಟ್‌ನಲ್ಲಿ ನೀಡಿರುತ್ತಾರೆ.  ಆ ಸಂಖ್ಯೆಗೆ ಕರೆ ಮಾಡಿ ವ್ಯವಹಾರ ಮಾಡಬಹುದು. ಶ್ರೀಮಂತ ಆಯ್ದ ವ್ಯಕ್ತಿಗಳ ಇ-ಮೇಲ್ ವಿಳಾಸ ಸಂಗ್ರಹಿಸಿ ಅವರಿಗೆ ಇ ಮೇಲ್ ಕಳುಹಿಸುವ ಮೂಲಕವೂ ವೇಶ್ಯಾವಾಟಿಕೆಗೆ ಉತ್ತೇಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.