ADVERTISEMENT

ಹೊಟ್ಟೆಪಾಡಿಗೆ ಕಳ್ಳನಾದ ಬಿ.ಇ ಪದವೀಧರ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 5:07 IST
Last Updated 3 ಏಪ್ರಿಲ್ 2018, 5:07 IST

ಬೆಂಗಳೂರು: ಜಯನಗರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಳ್ಳತನ ಮಾಡಿದ ಆರೋಪದಡಿ ಎಂಜಿನಿಯರಿಂಗ್ ಪದವೀಧರ ಪ್ರಭು ಕನಕರತ್ನಂನನ್ನು (34) ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಆರೋಪಿಯ ಪೋಷಕರು ತಮಿಳುನಾಡಿನವರಾಗಿದ್ದು, 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ತಂದೆ ಸದ್ಯ ಲಂಡನ್‌ನಲ್ಲಿದ್ದಾರೆ. ನಗರದಲ್ಲಿ ತಾಯಿ ಜತೆ ಪ್ರಭು  ವಾಸವಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದ್ದ ಆರೋಪಿ, ಬ್ರಿಟನ್‍ನ ವಿಶ್ವವಿದ್ಯಾಲಯವೊಂದರಲ್ಲಿ 2011ರಲ್ಲಿ ಎಂಬಿಎ ಪದವಿ ಪಡೆದಿದ್ದ. ನಗರದ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.

ADVERTISEMENT

ಎರಡು ತಿಂಗಳ ಹಿಂದಷ್ಟೇ ಆರೋಪಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೋರಿಸಿದಾಗ, 6 ತಿಂಗಳು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಪ್ರಭು, ಮನೆಯಲ್ಲೇ ಉಳಿದುಕೊಂಡಿದ್ದ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿತ್ತು. ಈ ಕಾರಣಕ್ಕೆ ಆತ ಕಳ್ಳತನ ನಡೆಸಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದರು.

ಮಲ್ಲೇಶ್ವರದಲ್ಲಿ ಮೊದಲ ಕೃತ್ಯ: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ಹೋಗಿ ಕಳವು ಮಾಡುವುದು ಸಲೀಸು ಎಂದು ತಿಳಿದ ಆರೋಪಿ, ಒಂದು ತಿಂಗಳ ಹಿಂದೆ ಮಲ್ಲೇಶ್ವರದ ಮಳಿಗೆಯೊಂದಕ್ಕೆ ಹೋಗಿದ್ದ. ಖರೀದಿ ನೆಪದಲ್ಲಿ, ನಾನಾ ಬಗೆಯ ಆಭರಣಗಳನ್ನು ತೋರಿಸುವಂತೆ ಮಳಿಗೆ ಸಿಬ್ಬಂದಿಗೆ ಹೇಳಿದ್ದ.

ಅದೇ ವೇಳೆ ಸಿಬ್ಬಂದಿ ಕಣ್ತಪ್ಪಿಸಿ, ಚಿನ್ನದ ಸರವೊಂದನ್ನು ಜೇಬಿನಲ್ಲಿ ಹಾಕಿಕೊಂಡಿದ್ದ. ನಂತರ, ‘ಆಭರಣ ಸರಿ ಇಲ್ಲ. ಮತ್ತೊಮ್ಮೆ ಬರುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಸಿಬ್ಬಂದಿ, ಸಂಜೆ ಆಭರಣಗಳ ಲೆಕ್ಕ ಮಾಡಿದಾಗಲೇ ಕಳ್ಳತನ ನಡೆದಿರುವ ವಿಷಯ ಗೊತ್ತಾಗಿತ್ತು. ಆ ಸಂಬಂಧ ಮಳಿಗೆಯವರು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

ಸೂಟು, ಬೂಟು ಧರಿಸಿ ಪ್ರವೇಶ: ಬೆಲೆ ಬಾಳುವ ಸೂಟು, ಬೂಟು ಧರಿಸಿಕೊಂಡು ಮಳಿಗೆ ಪ್ರವೇಶಿಸುತ್ತಿದ್ದ ಆರೋಪಿ, ಸಿಬ್ಬಂದಿ ಜತೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ. ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು. ಜಯನಗರದ ಮೂರನೇ ಹಂತದಲ್ಲಿರುವ ವಿಜಿಜೆ ಚಿನ್ನಾಭರಣ ಮಳಿಗೆಗೆ ಜ.13ರಂದು ಹೋಗಿದ್ದ ಆರೋಪಿ, ಅಲ್ಲಿಯೂ ಆಭರಣ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದ. ನಂತರ, ಟೇಬಲ್‌ ಮೇಲಿಟ್ಟಿದ್ದ ಆಭರಣಗಳನ್ನು ಕದ್ದಿದ್ದ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಳಿಗೆಯ ವ್ಯವಸ್ಥಾಪಕ ದೂರು ನೀಡಿದ್ದರು ಎಂದರು.

ಹೋಟೆಲ್‌ ಉದ್ಯಮದಲ್ಲಿ ನಷ್ಟ
ಲಂಡನ್‌ನಲ್ಲಿರುವ ಆರೋಪಿಯ ತಂದೆ ಉದ್ಯಮಿಯಾಗಿದ್ದು, ಮಗನಿಗಾಗಿ ನಗರದಲ್ಲಿ ₹70 ಲಕ್ಷ ವೆಚ್ಚದಲ್ಲಿ ಹೋಟೆಲ್‌ ಮಾಡಿಕೊಟ್ಟಿದ್ದರು. ಸಾಫ್ಟ್‌ವೇರ್‌ ಕಂಪನಿ ಕೆಲಸದ ಜತೆಗೆ ಆರೋಪಿಯು ಆ ಹೋಟೆಲ್‌ ಸಹ ನಡೆಸುತ್ತಿದ್ದ. ಅದರಲ್ಲಿ ಆತನಿಗೆ ನಷ್ಟ ಉಂಟಾಗಿತ್ತು.

ಹಲವರ ಬಳಿ ಸಾಲವನ್ನೂ ಮಾಡಿಕೊಂಡಿದ್ದ. ಕೆಲಸ ಬಿಟ್ಟ ನಂತರ ಕೈಯಲ್ಲೂ ಹಣವಿರಲಿಲ್ಲ. ಸಾಲದ ಹಣ ಮರಳಿಸುವಂತೆ ಸಾಲ ನೀಡಿದವರು ಪೀಡಿಸುತ್ತಿದ್ದರು. ಆರೋಪಿಯು ಕಳ್ಳತನ ಮಾಡುವುದಕ್ಕೆ ಈ ಪರಿಸ್ಥಿತಿಯೂ ಕಾರಣವಾಗಿತ್ತು ಎಂದು ಪೊಲೀಸರು ವಿವರಿಸಿದರು.

ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಸಿಕ್ಕಿಬಿದ್ದ
ಅಪರಾಧ ಜಾಗೃತಿಗಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿರುವ ಜಯನಗರ ಪೊಲೀಸರು, ಅದರಲ್ಲಿ ಆಭರಣ ಮಾಲೀಕರು ಹಾಗೂ ಸಿಬ್ಬಂದಿಯನ್ನೂ ಸೇರಿಸಿಕೊಂಡಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ಆರೋಪಿಯ ಕಳವಿನ ದೃಶ್ಯಗಳನ್ನು ಅದೇ ಗ್ರೂಪ್‌ನಲ್ಲಿ ಹಾಕಿದ್ದರು. ಆರೋಪಿಯನ್ನು ಕಂಡರೆ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದರು.

‘ಆರೋಪಿಯು ಶನಿವಾರ ಮಳಿಗೆಯೊಂದಕ್ಕೆ ಬಂದಿದ್ದ. ಆ ಬಗ್ಗೆ ಮಳಿಗೆಯವರು ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಅವನನ್ನು ಬಂಧಿಸಿದೆವು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.