ADVERTISEMENT

ಹೊಸಕೆರೆಹಳ್ಳಿ ನೂತನ ಬಸ್ ನಿಲ್ದಾಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 18:30 IST
Last Updated 20 ಆಗಸ್ಟ್ 2012, 18:30 IST
ಹೊಸಕೆರೆಹಳ್ಳಿ ನೂತನ ಬಸ್ ನಿಲ್ದಾಣ ಉದ್ಘಾಟನೆ
ಹೊಸಕೆರೆಹಳ್ಳಿ ನೂತನ ಬಸ್ ನಿಲ್ದಾಣ ಉದ್ಘಾಟನೆ   

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಬನಶಂಕರಿ 3ನೇ ಹಂತ 2ನೇ ಘಟ್ಟದ ಹೊಸಕೆರೆಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಸುಸಜ್ಜಿತ ಬಸ್ ನಿಲ್ದಾಣವನ್ನು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಆರ್. ಅಶೋಕ ಸೋಮವಾರ ಉದ್ಘಾಟಿಸುವ ಮೂಲಕ ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು.

ಸುಮಾರು 4.82 ಕೋಟಿ ರೂಪಾಯಿ ವೆಚ್ಚದಲ್ಲಿ 21.50 ಗುಂಟೆ ವಿಸ್ತೀರ್ಣದಲ್ಲಿ 2317 ಚ.ಮೀ.ಗಳಷ್ಟು ಕಟ್ಟಡ ನಿರ್ಮಿಸಲಾಗಿದೆ. ಕೆಳ, ನೆಲ, ಮೊದಲ ಹಾಗೂ ಎರಡನೇ ಅಂತಸ್ತು ಕಟ್ಟಡವನ್ನು 567.40 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. 48 ಚ.ಮೀ. ವಿಸ್ತೀರ್ಣದಲ್ಲಿ ಬಸ್ ತಂಗುದಾಣವಿದ್ದರೆ, 1550 ಚ.ಮೀ. ಜಾಗವನ್ನು ಬಸ್ ನಿಲುಗಡೆ ಹಾಗೂ ಪಾದಚಾರಿ ಮಾರ್ಗಕ್ಕಾಗಿ ಮೀಸಲಿಡಲಾಗಿದೆ.

ಈ ಬಸ್ ನಿಲ್ದಾಣದಲ್ಲಿ ವಿಚಾರಣೆ ಕೇಂದ್ರ, ಪಾಸ್ ವಿತರಣಾ ಕೇಂದ್ರ, ಸಂಚಾರ ನಿಯಂತ್ರಕರ ಕೊಠಡಿ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಆವರಣಕ್ಕೆ ವಿದ್ಯುತ್‌ದೀಪ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಬಸ್ ನಿಲ್ದಾಣದಿಂದ ನಗರದ 22 ಮಾರ್ಗಗಳಿಗೆ 282 ಟ್ರಿಪ್‌ಗಳಲ್ಲಿ ಬಸ್‌ಗಳು ಸಂಚರಿಸಲಿವೆ. ಇದರ ಜತೆಗೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ವರ್ತುಲ ರಸ್ತೆಯಲ್ಲಿ 200ಕ್ಕಿಂತ ಹೆಚ್ಚು ಟ್ರಿಪ್‌ಗಳಲ್ಲಿ ಬಸ್‌ಗಳು ಬಸ್ ನಿಲ್ದಾಣದ ಮುಂದೆಯೇ ಹಾದು ಹೋಗಲಿವೆ.

ಪ್ರಸ್ತುತ ಬಿಎಂಟಿಸಿಯು ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಹೊರವಲಯ ಪ್ರದೇಶಗಳ ಸಾರ್ವಜನಿಕರಿಗೆ ಪ್ರತಿ ದಿನ 6,120 ಮಾರ್ಗಗಳಲ್ಲಿ 80,700 ಟ್ರಿಪ್‌ಗಳೊಂದಿಗೆ ಸುಮಾರು 14.20 ಲಕ್ಷ ಕಿ.ಮೀ.ಗಳನ್ನು ಕ್ರಮಿಸುತ್ತಾ 48 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಈ ಪೈಕಿ 550 ವೋಲ್ವೋ, 92 ಎಸಿ ಸುವರ್ಣ ಮತ್ತು 25 ಕರೋನಾ ಎಸಿ ವಾಹನಗಳಿಂದ ನಗರದ ವಿವಿಧ ಭಾಗಗಳಿಗೆ ವಿಭಿನ್ನ ಸಾರಿಗೆ ಸೌಲಭ್ಯ  ನೀಡಲಾಗುತ್ತಿದೆ.

ಸಮಾರಂಭದಲ್ಲಿ ಸಂಸದ ಅನಂತಕುಮಾರ್, ಬಿಎಂಟಿಸಿ ಉಪಾಧ್ಯಕ್ಷ ಎಂ. ಕೃಷ್ಣಪ್ಪ, ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ರಾಮಚಂದ್ರಗೌಡ, ದಯಾನಂದ, ಮೇಯರ್ ಡಿ. ವೆಂಕಟೇಶಮೂರ್ತಿ, ಪಾಲಿಕೆ ಸದಸ್ಯರಾದ ಎಚ್.ಎಸ್. ಲಲಿತಾ ವಿಜಯಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.