ಯಲಹಂಕ: `ರೈತರ ಕುರಿತ ಕಾಳಜಿ ಕೇವಲ ಭಾವನಾತ್ಮಕ ಹೇಳಿಕೆಯಾಗಿ ಉಳಿಯಬಾರದು. ಅವರ ಬದುಕನ್ನು ಕಟ್ಟಿಕೊಳ್ಳುವಂತಹ ಹೊಸ ಬೀಜ ತಳಿಗಳ ಮೇಲೆ ಸಂಶೋಧನೆ ಮತ್ತು ಆವಿಷ್ಕಾರಗಳು ನಡೆಯಬೇಕು' ಎಂದು ನವದೆಹಲಿಯ ಸಸ್ಯತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಅಧ್ಯಕ್ಷ ಡಾ.ಆರ್.ಆರ್. ಹಂಚಿನಾಳ್ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಇಂಡಿಯನ್ ಸೊಸೈಟಿ ಆಫ್ ಸೀಡ್ಸ್ ಟೆಕ್ನಾಲಜಿ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ `ಬೀಜ ಸಂಶೋಧನೆಯಲ್ಲಿ ಆವಿಷ್ಕಾರಗಳು ಹಾಗೂ ಅಭಿವೃದ್ಧಿ' ಕುರಿತ 13ನೇ ರಾಷ್ಟ್ರೀಯ ಬೀಜಸಂಕಿರಣದ ಸಮಾರೋಪ ಸಮಾರಂದಲ್ಲಿ ಮಾತನಾಡಿದ ಅವರು, `ಭತ್ತದ ನಾನಾ ತಳಿಗಳ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸಬೇಕು ಎಂದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರೈತರು ಸ್ವಾವಲಂಬನೆ ಮತ್ತು ನಿಸ್ವಾರ್ಥ ಚಿಂತನೆಗಳನ್ನು ಬೆಳೆಸಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಸಮೃದ್ಧಿಯಾಗಿ, ವರಮಾನ ಹೆಚ್ಚಾಗುವುದರೊಂದಿಗೆ ಕೃಷಿಕರು ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೃಷಿ ವಿವಿಯ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, `ರೈತರಿಗೆ ಅಗತ್ಯ ಇರುವ ಉತ್ತಮ ಗುಣಮಟ್ಟದ ಬೀಜಗಳನ್ನು ಜಿಲ್ಲಾವಾರು ಹಂಚಿಕೆ ಮಾಡಬೇಕು. ಅಲ್ಲದೆ ಸರಿಯಾದ ಸಮಯಕ್ಕೆ ಬೀಜಗಳನ್ನು ತಲುಪಿಸುವ ಮೂಲಕ ರೈತರ ಸಮಸ್ಯೆಗಳ ನಿವಾರಣೆಗೆ ವಿಜ್ಞಾನಿಗಳು ಗಮನ ಹರಿಸಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.