ಬೆಂಗಳೂರು: ರಾಷ್ಟ್ರೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ (ಆಧಾರ್) ಮುಖ್ಯಸ್ಥ ನಂದನ್ ನಿಲೇಕಣಿ ಅವರ ಸ್ಪರ್ಧೆಯಿಂದ ದೇಶದ ಗಮನ ಸೆಳೆದ ಪ್ರತಿಷ್ಠಿತ ‘ಬೆಂಗಳೂರು ದಕ್ಷಿಣ’ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ ಕುಮಾರ್ ಮೇಲುಗೈ ಸಾಧಿಸಿದ್ದಾರೆ.
ನಿಲೇಕಣಿ ಅವರನ್ನು 2,28,575 ಮತಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಸತತ ಆರನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ. 2009ರ ಚುನಾವಣೆಯಲ್ಲಿ ಅನಂತ ಕುಮಾರ್ ಅವರು 37,162 ಮತಗಳ ಅಂತರದಿಂದ ಜಯ ಗಳಿಸಿದ್ದರು. ಅನಂತಕುಮಾರ್ ಅವರು 4,37,953 ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ 4,00,341 ಮತ ಪಡೆದಿದ್ದರು. 23 ವರ್ಷಗಳ ಹಿಂದೆ ಕೈತಪ್ಪಿದ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಆದರೆ, ಈ ಸಲ 2.29 ಲಕ್ಷ ಅಂತರದಿಂದ ಸೋಲು ಕಂಡಿತು.
ನಿಲೇಕಣಿ ರಾಜಕೀಯ ಪ್ರವೇಶದ ಸುದ್ದಿಯಿಂದಾಗಿ ಚುನಾವಣೆ ಘೋಷಣೆಗೂ ಎರಡು ತಿಂಗಳ ಮೊದಲೇ ಈ ಕ್ಷೇತ್ರದಲ್ಲಿ ಸಂಚಲನ ಉಂಟಾಗಿತ್ತು. ಬಹುತೇಕ ಸುಶಿಕ್ಷಿತ ಮತದಾರರೇ ಇರುವ ಕ್ಷೇತ್ರದಲ್ಲಿ ಈ ಸಲ ಜಿದ್ದಾಜಿದ್ದಿನ ಪೈಪೋಟಿಯ ನಿರೀಕ್ಷೆ ವ್ಯಕ್ತವಾಗಿತ್ತು. 23 ಅಭ್ಯರ್ಥಿಗಳು ಕಣದಲ್ಲಿದ್ದರೂ ಈ ಇಬ್ಬರ ನಡುವೆಯೇ ನೇರ ಹಣಾಹಣಿ ನಡೆದಿತ್ತು. ಜೆಡಿಎಸ್ ಅಭ್ಯರ್ಥಿ ರೂತ್ ಮನೋರಮಾ ಅವರು 3ನೇ ಸ್ಥಾನ ಪಡೆದರು. ಆಮ್ ಆದ್ಮಿ ಪಕ್ಷದ ನೀನಾ ಪಿ.ನಾಯಕ್ 21,119 ಮತಗಳನ್ನು ಗಳಿಸಿದರು.
ನಿಲೇಕಣಿ ಅವರು ಕೆಲವೇ ಕಾರ್ಯಕರ್ತರ ಜೊತೆಗೆ ಮತ ಎಣಿಕೆ ಕೇಂದ್ರಕ್ಕೆ ಎಂಟು ಗಂಟೆಗೆ ಬಂದರು. ಅನಂತ್ ಕುಮಾರ್ ಅವರು ಎಣಿಕೆ ಆರಂಭವಾಗುವ ಹೊತ್ತಿಗೆ ಹಾಜರಾದರು. ಮೊದಲ ಸುತ್ತಿನಿಂದಲೇ ಅನಂತ್ ಅವರ ಮುನ್ನಡೆ ಹಿಗ್ಗುತ್ತಲೇ ಹೋಯಿತು. ಮೊದಲ ಸುತ್ತಿನಲ್ಲಿ ಅನಂತ್ ಅವರು 17,000 ಮತಗಳ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನ ವೇಳೆಗೆ ಮುನ್ನಡೆ 27,689 ಮತಕ್ಕೆ ಏರಿತು. ಸೋಲಿನ ಸುಳಿವು ಸಿಕ್ಕ ನಿಲೇಕಣಿ ಅವರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. 10ನೇ ಸುತ್ತಿನ ವೇಳೆಗೆ ಅನಂತ್ ಅವರ ಮುನ್ನಡೆ ಲಕ್ಷ ದಾಟಿತ್ತು. 19ನೇ ಸುತ್ತಿನ ವೇಳೆಗೆ ಮುನ್ನಡೆ ಅಂತರ 2 ಲಕ್ಷದ ಗಡಿ ದಾಟಿತ್ತು. ಮಧ್ಯಾಹ್ನ 12.15 ರ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಬಂದ ನಿಲೇಕಣಿ ಅವರು ಅನಂತ್ ಅವರಿಗೆ ಶುಭ ಹಾರೈಸಿ ನಿರ್ಗಮಿಸಿದರು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ತಲಾ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಭಾರಿ ಮುನ್ನಡೆ ಸಾಧಿಸಿತು. ಬಸವನಗುಡಿ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಅಂತರ 50,000 ಗಡಿ ದಾಟಿತ್ತು. 10 ಸುತ್ತಿನ ವರೆಗೆ ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿತ್ತು. ಕೊನೆಗೆ ಇಲ್ಲಿ ಬಿಜೆಪಿ ಆರು ಸಾವಿರ ಮತಗಳ ಮುನ್ನಡೆ ಗಳಿಸಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಕ್ಷೇತ್ರದಲ್ಲೂ ಬಿಜೆಪಿ 15,000 ಮತಗಳ ಮುನ್ನಡೆ ಸಾಧಿಸಿತು.
ಬಿಜೆಪಿ ಸೇರ್ಪಡೆಯ ತಮ್ಮ ಯತ್ನ ತಡೆದ ಅನಂತಕುಮಾರ್ ಅವರ ಗೆಲುವಿಗೆ ಅಡ್ಡಗಾಲು ಹಾಕುವ ಏಕೈಕ ಉದ್ದೇಶದಿಂದ ಸ್ಪರ್ಧಿಸಿದ್ದ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಕೇವಲ 4,228 ಮತಗಳನ್ನು ಪಡೆದರು. ಕ್ಷೇತ್ರದಲ್ಲಿ 7,394 ಮಂದಿ ನೋಟಾ ಮತ ಚಲಾಯಿಸಿದರು.
ಕಾಣದ ಸಂಭ್ರಮ: ಮತ ಎಣಿಕೆ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಕಾರ್ಯಕರ್ತರ ಅಬ್ಬರ ಕಂಡು ಬರಲಿಲ್ಲ. ಬೆಳಿಗ್ಗೆ 10 ಗಂಟೆ ವರೆಗೆ ಪಕ್ಷದ ಕಾರ್ಯಕರ್ತರಿಗಿಂತ ಕೇಂದ್ರದಲ್ಲಿ ಪೊಲೀಸರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ಬಿಜೆಪಿ ಗೆಲುವಿನ ಸುಳಿವು ಸಿಕ್ಕ ಬಳಿಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೇಂದ್ರದ ಕಡೆಗೆ ಬರಲಾರಂಭಿಸಿದರು.
ಹೊತ್ತೇರುತ್ತಿದ್ದಂತೆ ಕೇಂದ್ರದಲ್ಲಿ ಕೆಲವೇ ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ನಿರ್ಗಮಿಸಿದರು. ಸಂಜೆವರೆಗೂ ಕೇಂದ್ರದ ಕಡೆಗೆ ಕ್ಷೇತ್ರದ ಕಾಂಗ್ರೆಸ್ ಶಾಸಕರು ಸುಳಿಯಲಿಲ್ಲ. ಮಧ್ಯಾಹ್ನ 2.30ಕ್ಕೆ ಫಲಿತಾಂಶವನ್ನು ಘೋಷಿಸಲಾಯಿತು.
ಶಾಸಕರಾದ ಆರ್.ಅಶೋಕ, ಬಿ.ಎನ್. ವಿಜಯಕುಮಾರ್, ಸತೀಶ್ ರೆಡ್ಡಿ, ಎಲ್.ಎ. ರವಿಸುಬ್ರಹ್ಮಣ್ಯ, ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯರಾದ ವಿ.ಸೋಮಣ್ಣ, ಅಶ್ವತ್ಥನಾರಾಯಣ, ಮೇಯರ್ ಬಿ.ಎಸ್. ಸತ್ಯನಾರಾಯಣ, ಜಗ್ಗೇಶ್, ಬಿಬಿಎಂಪಿ ಸದಸ್ಯರು ಸಂಭ್ರಮೋಲ್ಲಾಸದಲ್ಲಿ ಭಾಗಿಯಾದರು.
ಜನರ ವಿಜಯ
ನಗರದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇದು ಜನತೆಗೆ ಹಾಗೂ ಒಗ್ಗಟ್ಟಿಗೆ ಸಿಕ್ಕ ಜಯ. ನಗರದಲ್ಲಿ ಸಮೂಹ ಸಾರಿಗೆ, ಹಸಿರು ಪರಿಸರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಎಲ್ಲ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರ, ದುರ್ಬಲ ನಾಯಕತ್ವವನ್ನು ಮತದಾರರು ತಿರಸ್ಕರಿಸಿದ್ದಾರೆ.
–ಅನಂತ ಕುಮಾರ್ ಬಿಜೆಪಿ ಸಂಸದ
ಜನಸೇವೆ ಮುಂದುವರಿಕೆ
ಈ ಸೋಲು ಅನಿರೀಕ್ಷಿತ. ನನಗೆ ಸಂಸದನಾಗಿ ಕೆಲಸ ಮಾಡುವ ಅವಕಾಶ ತಪ್ಪಿ ಹೋಗಿರಬಹುದು. ಆದರೆ, ನಗರದಲ್ಲಿ ಧನಾತ್ಮಕ ಬದಲಾವಣೆ ಹುಟ್ಟು ಹಾಕಲು ಎಲ್ಲ ಪಕ್ಷಗಳ ಜನರೊಂದಿಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಜನರೊಂದಿಗೆ ಕೆಲಸ ಮಾಡುವ ನನ್ನ ಧ್ಯೇಯ ಮುಂದುವರಿಯಲಿದೆ. ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿದು ಜನಸೇವೆ ಮಾಡಲಿದ್ದೇನೆ. ನಾನು ಚುನಾವಣಾ ರಾಜಕೀಯಕ್ಕೆ ಹೊಸಬನಾದರೂ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತುಂಬ ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಋಣಿ.
ಫಲಿತಾಂಶ ಏನೇ ಇರಲಿ, ಈ ಚುನಾವಣೆಯ ಪ್ರಚಾರವು ಒಂದು ಬಲವಾದ ಸಂದೇಶ ನೀಡಿದೆ. ಜನರು ಉತ್ತಮ ಆಡಳಿತಕ್ಕಾಗಿ ಎದುರು ನೋಡುತ್ತಿದ್ದಾರೆ.
–ನಂದನ್ ನಿಲೇಕಣಿ, ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.