ADVERTISEMENT

‘ನಿಮ್ಮ ದಮ್ಮಯ್ಯ, ಮನೆ ಒಡೆಯಬೇಡಿ’

ಅಂಗಲಾಚಿ ಬೇಡಿಕೊಂಡ ಸ್ಥಳೀಯರು * ಮನೆ ಸಾಲ ಇನ್ನೂ ಇದೆ ಎಂದು ಗೋಳಿಟ್ಟರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 19:45 IST
Last Updated 6 ಆಗಸ್ಟ್ 2016, 19:45 IST
ಪ್ರದೀಪ್‌ ಬಾಳಿಗಾ
ಪ್ರದೀಪ್‌ ಬಾಳಿಗಾ   

ಬೆಂಗಳೂರು: ‘ನಮ್ಮಪ್ಪ ಬ್ಯಾಂಕ್‌ ಅಧಿಕಾರಿ ಆಗಿದ್ದವರು. ಜಾಗ ಕೊಳ್ಳುವಾಗ ಎಲ್ಲ ದಾಖಲೆಗಳನ್ನೂ ಪರಿಶೀಲಿಸಿದ್ದರು. ನಾನು ಎಂಜಿನಿಯರಿಂಗ್‌ ಓದಿದ್ದೇನೆ. ಈಗ ಅವಶೇಷ ಬಿದ್ದಿವೆಯಲ್ಲ, ಆ ಜಾಗದಲ್ಲೇ ಕುಳಿತು ಮನೆ ಹೇಗಿರಬೇಕು ಎಂದು ಯೋಜನೆ ರೂಪಿಸಿದ್ದೆವು’.

–ಅವನಿ ಶೃಂಗೇರಿನಗರದಲ್ಲಿ ಅಪ್ಪ ಪ್ರೀತಿಯಿಂದ ಕಟ್ಟಿಸಿದ್ದ ಮನೆ ಶನಿವಾರ ಧರೆಗುಳಿದ ಸ್ಥಳದಲ್ಲೇ ನಿಂತು ಪ್ರಿಯಾಂಕ ಪ್ರಕಾಶ್‌ ಹೇಳುತ್ತಿದ್ದರು. ‘ಮನೆಗೆ ನೀರು ನುಗ್ಗಬಾರದು ಎಂಬ ಉದ್ದೇಶದಿಂದಲೇ ತುಸು ಎತ್ತರದಲ್ಲಿ ಕಟ್ಟಡ ಕಟ್ಟಿದ್ದೆವು. ಸಂಭ್ರಮದಿಂದ ಗೃಹಪ್ರವೇಶ ನಡೆಸಿ, ಮನೆ ಬಾಡಿಗೆ ಕೊಟ್ಟಿದ್ದೆವು’ ಎಂದು ತಿಳಿಸಿದರು.

‘ರಾಜಕಾಲುವೆ ಮಾರ್ಗ ಬೇರೆ ಕಡೆಗಿದೆ. ಅಲ್ಲೆಲ್ಲ ದೊಡ್ಡ ಅಪಾರ್ಟ್‌ಮೆಂಟ್‌ಗಳು ಎದ್ದಿವೆ. ಹೀಗಾಗಿ ಅದನ್ನು ನಮ್ಮಂತಹ ಮಧ್ಯಮ ವರ್ಗದವರ ಸ್ವತ್ತು ಇರುವ ಕಡೆಗೆ ತಿರುಗಿಸಲಾಗಿದೆ. ಎರಡು ವರ್ಷಗಳ ಹಿಂದೆ ಕಾಂಪೌಂಡ್‌ ಒಡೆದರು. ಈಗ ಅರ್ಧ ಮನೆ ಉರುಳಿಬಿದ್ದಿದೆ. ಮಿಕ್ಕ ಭಾಗ ಯಾವಾಗ ಹೋಗುವುದೋ’ ಎಂದು ನಿಟ್ಟುಸಿರುಬಿಟ್ಟರು.

‘ಬಾಡಿಗೆ ಇದ್ದವರಿಗೆ ಸಾಮಾನು ಸಾಗಿಸಲು ಸಹ ಅವಕಾಶ ಕೊಟ್ಟಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಬಿಬಿಎಂಪಿ ಈ ರೀತಿ ಮಾಡುವ ಜರೂರತ್ತು ಏನಿತ್ತು? ನಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ಕೊಡಬೇಕಿತ್ತು’ ಎಂದು ಹೇಳಿದರು.

ಚಹಾ ಅಂಗಡಿ ಇಟ್ಟುಕೊಂಡಿದ್ದ ಪ್ರದೀಪ್‌ ರಾವ್ ಎಂಬುವರು ಮುಕ್ಕಾಲು ಮನೆಯನ್ನೇ ಕಳೆದುಕೊಂಡು ಗೋಳಾಡುತ್ತಿದ್ದರು. ಮನೆ ಒಡೆಯಲು ಅರ್ಥ್‌ ಮೂವರ್‌ಗಳು ಬಂದಾಗ ಅವರ ಪತ್ನಿ ಉಷಾ ಅವರ ರೋಧನ ಮನಕಲಕುವಂತಿತ್ತು. ‘ನಿಮ್ಮ ದಮ್ಮಯ್ಯ, ದಯವಿಟ್ಟು ಒಡೆಯಬೇಡಿ.ಕೈಮುಗಿಯುತ್ತೇನೆ’ ಎಂದು ಬೇಡುತ್ತಿದ್ದರು. ‘ನಮ್ಮ ಜೀವನವನ್ನೇ ತೇಯ್ದು ಒಂದು ನೆರಳು ಕಟ್ಟಿಕೊಂಡಿದ್ದೆವು. ಇನ್ನೆಲ್ಲಿ ಬದುಕುವುದು’ ಎಂದು ಗೋಳಾಡಿದರು.

‘ಎರಡು ಮನೆ ಹಾಗೂ ಒಂದು ರೂಮ್‌ ಬಾಡಿಗೆ ಕೊಟ್ಟಿದ್ದೆ. ಆ ಬಾಡಿಗೆಯಿಂದ ಬರುತ್ತಿದ್ದ ಹಣದಿಂದ ಬ್ಯಾಂಕ್‌ ಕಂತು ಕಟ್ಟುತ್ತಿದ್ದೆ. ಈಗ ನಮ್ಮ ಕುಟುಂಬದ ಜತೆಗೆ ಬಾಡಿಗೆದಾರರೂ ಬೀದಿಗೆ ಬಿದ್ದಿದ್ದಾರೆ’ ಎಂದು ಪ್ರದೀಪ್‌ ರಾವ್‌ ಕಣ್ಣೀರು ಹಾಕಿದರು.

‘ಆಂಧ್ರ ಬ್ಯಾಂಕ್‌ನಲ್ಲಿ ಇನ್ನೂ ₹4 ಲಕ್ಷ ಸಾಲ ಇದೆ. ಸಾಮಾನುಗಳೆಲ್ಲ ರಸ್ತೆ ಮೇಲಿವೆ. ಈಗ ಎಲ್ಲಿ ಆಶ್ರಯ ಪಡೆಯುವುದು’ ಎಂದು ಪ್ರಶ್ನಿಸಿದರು. ‘ರಾಜಕಾಲುವೆಯನ್ನು ತಿರುಗಿಸಲು ಮೊದಲೇ ತೀರ್ಮಾನಿಸಿದ್ದರೆ ನಮ್ಮ ಮನೆಗೆ ಹಾನಿ ಆಗುತ್ತಿರಲಿಲ್ಲ’ ಎಂದರು.

ಎಲ್‌.ಕೆ. ಸತ್ಯನಾರಾಯಣ ಹಾಗೂ ಸಮೀವುಲ್ಲಾ ಎಂಬುವರು 1990ರ ದಶಕದ ಉತ್ತರಾರ್ಧದಲ್ಲಿ ಈ ಬಡಾವಣೆ ಅಭಿವೃದ್ಧಿಪಡಿಸಿದ್ದರು. ಈ ಬಡಾವಣೆಯಲ್ಲಿ ಸದ್ಯ ಮನೆ ಕಟ್ಟಿಕೊಂಡವರು 2000ನೇ ಇಸ್ವಿಯಿಂದ ಈಚೆಗೆ ಬಂದವರು.

ಮನೆಯ ಮುಂಭಾಗವನ್ನು ಕಳೆದುಕೊಳ್ಳುತ್ತಿರುವ ಪ್ರದೀಪ್‌ ಬಾಳಿಗಾ ಎಂಬುವರು, ‘2009ರಲ್ಲಿ ನಾನು ಮನೆಕಟ್ಟುವ ಮುನ್ನ ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸಿದ್ದೆ.ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿ, ನಮ್ಮ ನಿವೇಶನವೇನೂ ರಾಜಕಾಲುವೆಯಲ್ಲಿ ಇಲ್ಲ ಎಂಬುದನ್ನು ದೃಢಪಡಿಸಿದರು. ಅದಕ್ಕೆ ಪ್ರಮಾಣಪತ್ರ ನೀಡಿ, ನಕ್ಷೆಯನ್ನೂ ಮಂಜೂರು ಮಾಡಿದರು’ ಎಂದು ವಿವರಿಸಿದರು. ಬಿಬಿಎಂಪಿಯಿಂದ ನೀಡಲಾಗಿದ್ದ ದಾಖಲೆಗಳನ್ನೂ ಅವರು ಪ್ರದರ್ಶಿದರು.

‘ನಾನೀಗ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಿದ್ದೇನೆ. ತೆರವು ಕಾರ್ಯಾಚರಣೆಯಿಂದ ನನಗೆ ಆಗುವ ಹಾನಿಯನ್ನು ಭರಿಸುವಂತೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಕೋರಿ ಕೋರ್ಟ್‌ ಮೆಟ್ಟಿಲನ್ನೂ ಏರಲಿದ್ದೇನೆ’ ಎಂದು ಅವರು ಹೇಳಿದರು.

ಮನೆ ಒಡೆಯುವ ಭೀತಿಯಿಂದ ಹೊರಗೆ ಬಂದು ನಿಂತಿದ್ದ ಗರ್ಭಿಣಿ ಪ್ರೀತಿ ಕಂಚಿ ಎಂಬುವರು ‘2008ರಲ್ಲೇ ಮನೆ ಕಟ್ಟಿದ್ದೇವೆ. ಈಗ ಒಡೆಯಲು ಬಂದಿದ್ದಾರೆ. ನಾವು ಎಲ್ಲಿಗೆ ಹೋಗಬೇಕು’ ಎಂದು ಕೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಆಯುಕ್ತರಿಗೆ ‘ರಾಜಕಾಲುವೆ ಇಲ್ಲಿಲ್ಲ ಸರ್‌’ ಎಂದು ಕೆಲವರು ವಾದಿಸಿದರು. ‘ಮೂಲ ನಕ್ಷೆ ಇಟ್ಟುಕೊಂಡು ಭೌಗೋಳಿಕ ಮಾಹಿತಿ ವ್ಯವಸ್ಥೆ ಸಹಾಯದಿಂದ ರಾಜಕಾಲುವೆ ಮಾರ್ಗವನ್ನು ಗುರುತಿಸಿಕೊಂಡು ಬಂದಿದ್ದೇವೆ. ಐದು ಸಲ ಮರು ಪರಿಶೀಲನೆ ಮಾಡಿ ಖಚಿತ ಮಾಡಿಕೊಂಡಿದ್ದೇವೆ’ ಎಂದು ಅವರು ಮಾರುತ್ತರ ನೀಡಿದರು.

ಮೂಲೆ ನಿವೇಶನದಲ್ಲಿ ಕೆಳಗೆ ಮಳಿಗೆ ಹಾಗೂ ಮೇಲೆ ಮನೆ ನಿರ್ಮಿಸಿದ್ದ ರಾಮಚಂದ್ರಪ್ಪ ಎಂಬ ಅಂಗವಿಕಲ ವ್ಯಕ್ತಿ, ಮನೆಯ ಕಾಂಪೌಂಡ್‌ ಒಡೆಯದಂತೆ ಆಗ್ರಹಿಸುತ್ತಾ ಸಹಾಯಕರ ನೆರವಿನಿಂದ ಅರ್ಥ್‌ ಮೂವರ್‌ ಮುಂದೆ ಬಂದುನಿಂತರು. ‘ನಿಮ್ಮ ಮನೆಗೆ ಏನೂ ಆಗಲ್ಲ ಹೋಗ್ರೀ’ ಎಂದು ಅಧಿಕಾರಿಗಳು ಗದರಿ ಕಳುಹಿಸಿದರು.

‘ನಮಗೆ ಮುನ್ಸೂಚನೆ ನೀಡದೆ ಹೇಗೆ ಮನೆ ಒಡೆಯಲು ಬಂದಿರಿ’ ಎಂದು ನಾಗರಾಜ್‌ ಲಕ್ಕಶೆಟ್ಟಿ, ಶ್ರೀಕಾಂತ್‌ ಮತ್ತಿತರರು ಪ್ರಶ್ನಿಸಿದರು. ‘ನಿಮ್ಮ ಮನೆಗಳಿರುವುದು ರಾಜಕಾಲುವೆ ಮೇಲೆ. ಅದರ ಒತ್ತುವರಿ ತೆರವಿಗೆ ಕೆಎಂಸಿ ಕಾಯ್ದೆ ಪ್ರಕಾರ ನೋಟಿಸ್‌ ನೀಡಬೇಕಿಲ್ಲ’ ಎಂದು ಆಯುಕ್ತರು ಉತ್ತರಿಸಿದರು.

ಕಟ್ಟುವಾಗಲೇ ನೆಲಸಮವಾಯ್ತು: ಕಸವನಹಳ್ಳಿ ಕೆರೆಯಿಂದ ಕೈಕೊಂಡ್ರಹಳ್ಳಿ ಕೆರೆ ಸಂಪರ್ಕ ಕಲ್ಪಿಸುವ ಸುಮಾರು 1,100 ಮೀಟರ್‌ ಉದ್ದದ ರಾಜಕಾಲುವೆಯೂ ಒತ್ತುವರಿಯಾಗಿದ್ದು, ಅದರ ತೆರವು ಕಾರ್ಯಾಚರಣೆಯೂ ಶುರುವಾಗಿದೆ. ನಿರ್ಮಾಣ ಹಂತದಲ್ಲಿದ್ದ ಮನೆಯೂ ಸೇರಿದಂತೆ ನಾಲ್ಕು ಕಟ್ಟಡಗಳನ್ನು ಶನಿವಾರ ಒಡೆಯಲಾಯಿತು.

ಮತ್ತೆ ಕಾರ್ಯಾಚರಣೆ
‘ನೀರು ಹರಿಯಲು ಮೊದಲು ರಾಜಕಾಲುವೆ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಕಾರ್ಯಾಚರಣೆ ಆರಂಭವಾಗಿದೆ. ಬಳಿಕ ಹಸಿರು ನ್ಯಾಯ ಮಂಡಳಿ ತೀರ್ಪಿನಂತೆ ಮೀಸಲು (ಬಫರ್‌) ಪ್ರದೇಶ ಬಿಡಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದರು.
 

₹ 4 ಲಕ್ಷ ಪರಿಹಾರ
ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಪ್ರದೀಪ್‌ ರಾವ್‌ ಅವರ ಕುಟುಂಬಕ್ಕೆ ಉಳಿದಿರುವ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ವಸತಿ ಯೋಜನೆ ಮೂಲಕ ನನ್ನ ವಾರ್ಡ್‌ಗೆ ಮಂಜೂರಾಗುವ ಅನುದಾನದಲ್ಲಿ ₹ 4 ಲಕ್ಷವನ್ನು ಅವರ ಕುಟುಂಬಕ್ಕೆ ನೀಡುವೆ ಎಂದು ಅರಕೆರೆ ವಾರ್ಡ್‌ ಕಾರ್ಪೊರೇಟರ್‌ ಭಾಗ್ಯಲಕ್ಷ್ಮಿ ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

***
ಒತ್ತುವರಿ ತೆರವು ಅನಿವಾರ್ಯ

ಯಾರೋ ಮಾಡಿದ ತಪ್ಪಿಗೆ ಅಮಾಯಕರು ದಂಡ ತೆರಬೇಕಿದೆ. ಸರ್ಕಾರಿ ಜಾಗದಲ್ಲೇ ಈ ನಿವೇಶನಗಳಿವೆ. ಈ ವಿಷಯದಲ್ಲಿ ನಾನೂ ಅಸಹಾಯಕ. ಆದರೆ, ರಾಜಕಾಲುವೆಗಳು ಒತ್ತುವರಿಯಿಂದ ಮುಕ್ತವಾಗಲೇಬೇಕು. ಪರ್ಯಾಯ ವ್ಯವಸ್ಥೆ ಕುರಿತು ಸೋಮವಾರ ನಡೆಯಲಿರುವ ಬಿಬಿಎಂಪಿ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಹೇಳಿದರು.

ADVERTISEMENT


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.