ADVERTISEMENT

‘ಪೆನ್ನಿಗೂ 20 ಮೈಲು ನಡೆಯಬೇಕು’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 19:14 IST
Last Updated 6 ಫೆಬ್ರುವರಿ 2014, 19:14 IST

ಬೆಂಗಳೂರು: ‘ಒಂದು ಪೆನ್ನು ಬೇಕೆಂದರೂ ನಮ್ಮೂರಿನಿಂದ 20 ಮೈಲು ದೂರ ಹೋಗಬೇಕು’ ಎಂದು ಬಿಹಾರ್‌ನ ಓರಾನ್ ಬುಡಕಟ್ಟಿನ ಸರವಣ ಕುಮಾರ್ ಬೇಸರ ವ್ಯಕ್ತಪಡಿಸಿದರು.

ನೆಹರೂ ಯುವ ಕೇಂದ್ರ ಸಂಘಟನೆ (ಎನ್‌­ವೈಕೆಎಸ್) ಮತ್ತು ಕೇಂದ್ರ ಗೃಹ ಸಚಿವಾಲಯದ ಸಹಯೋಗದಲ್ಲಿ ಗುರುವಾರ ಯವನಿಕಾದಲ್ಲಿ ಏರ್ಪ­ಡಿಸಿದ್ದ 6ನೇ ಬುಡಕಟ್ಟು ಯುವ ವಿನಿಮಯ ಕಾರ್ಯ­ಕ್ರಮದ ಸಮಾರೋಪದ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.

‘ಮೊದಲ ಬಾರಿ ಬೆಂಗಳೂರಿನಂತಹ ದೊಡ್ಡ ನಗರವನ್ನು ನೋಡುತ್ತಿದ್ದೇನೆ. ಇಲ್ಲಿ ಎಲ್ಲವೂ ಸಿಗುತ್ತದೆ. ಶಿಬಿರದಲ್ಲಿ ನಮ್ಮ ಸಂಸ್ಕೃತಿ, ಜೀವನ ಮತ್ತು ಸಮಸ್ಯೆಗಳನ್ನು ಹಂಚಿಕೊಂಡೆವು. ಇಲ್ಲಿರುವ ಅಭಿವೃದ್ಧಿ ನಮ್ಮಲ್ಲಿ ಏಕಿಲ್ಲ’ ಎಂದು ಪ್ರಶ್ನಿಸಿದರು.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎ.ಗಣಪತಿ ಮಾತನಾಡಿ, ‘ಛತ್ತೀಸ್‌ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಲ್ಲಿ ಜನರು ಒಂದೆಡೆ ನಕ್ಸಲರು ಮತ್ತೊಂದೆಡೆ ಪೊಲೀಸರ ಬಂದೂಕಿನ ಅಡಿಯಲ್ಲಿ ಬದುಕುತ್ತಿದ್ದಾರೆ. ಭದ್ರತೆ ಸಮಸ್ಯೆಯ ಕಾರಣದಿಂದ ಎಲ್ಲಾ ಸಾಮಾಜಿಕ ಸಂಘಟನೆಗಳು, ಅಭಿವೃದ್ಧಿಪರ ಸಂಸ್ಥೆಗಳು ಈ ರಾಜ್ಯಗಳಿಗೆ ಹೋಗಲು ಹಿಂದೇಟು ಹಾಕುತ್ತಿವೆ’ ಎಂದರು.

ಗೃಹ ಸಚಿವ ಕೆ.ಜೆ.ಜಾರ್ಜ್  ಮಾತನಾಡಿ, ‘ಶೈಕ್ಷಣಿಕ ನೀತಿ, ಕೌಶಲ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ನೀತಿಗಳನ್ನು ರೂಪಿಸುವಾಗ ಇಂತಹ ಕಾರ್ಯಕ್ರಮಗಳು ಸರ್ಕಾರದ ನೆರವಿಗೆ ಬರುತ್ತವೆ. ಬುಡಕಟ್ಟು ಯುವಕರನ್ನು ಮುಖ್ಯವಾಹಿನಿಗೆ ತರಲು ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದರು.

ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಿಂದ ಬಂದಿದ್ದ ಶಿಬಿರಾರ್ಥಿಗಳು ಸಹಶಿಬಿರಾರ್ಥಿಗಳನ್ನು ಬೀಳ್ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ಇತರರ ಭಾಷೆ ಅರ್ಥವಾಗದಿದ್ದಾಗ ಸಮಸ್ಯೆಯಾಗುತ್ತಿತ್ತು. ಎಷ್ಟೋ ಬಾರಿ ಆಂಗಿಕ ಅಭಿನಯದ ಮೂಲಕವೇ ಮಾತನಾಡಿದ್ದೇನೆ. ಪಕ್ಕದ ಊರಿನವರೇ ತಿಳಿದಿರದ ನಮಗೆ  ಇಲ್ಲಿ ಅನೇಕ ವಿಷಯಗಳನ್ನು ತಿಳಿಸಿದರು’ ಎನ್ನುತ್ತಾರೆ ಜಾರ್ಖಂಡ್‌ನ ಸೊಹ್ದಾಗ್ ಬುಡಕಟ್ಟಿನ ಜೂಮರ್ ಕಲಾವಿದ ಗುಲ್ಶನ್.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಅಭಯ್ ಚಂದ್ರ ಜೈನ್, ಎನ್‌ವೈಕೆಎಸ್‌ನ ನಿರ್ದೇಶಕ ಡಾ. ಪ್ರಭಾ ಕಾಂತ್, ಎನ್‌ವೈಕೆಎಸ್‌ನ  ದಕ್ಷಿಣ ವಲಯದ ನಿರ್ದೇಶಕ ಆರ್.ನಟರಾಜನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.