ಬೆಂಗಳೂರು: ‘ಎಲ್ಲ ಪ್ರಶಸ್ತಿಗಳೂ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾಸ್ತಿ ಪ್ರಶಸ್ತಿಯು ತನ್ನದೇ ಆದ ಘನತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿ ಮತ್ತು ಡಾ. ಮಾಸ್ತಿ ಟ್ರಸ್ಟ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಮಾಸ್ತಿ ಪ್ರಶಸ್ತಿ ಪ್ರದಾನ ಹಾಗೂ ಮಾಸ್ತಿ ಕಥಾ ಪುರಸ್ಕಾರ’ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಂದು ಕೆಲವು ಪ್ರಶಸ್ತಿಗಳು ವಾಗ್ವಾದಕ್ಕೆ ಈಡಾಗಿವೆ. ಇನ್ನು ಕೆಲವು ಪ್ರಶಸ್ತಿಗಳು ಕೋರ್ಟ್ ಮೆಟ್ಟಿಲೇರಿವೆ. ಹೀಗಾಗಿ ಯಾವುದೇ ಪ್ರಶಸ್ತಿಗಳ ಕುರಿತು ಗಾಬರಿ ಹುಟ್ಟುವಂತಾಗಿದೆ. ಆದರೆ, ಮಾಸ್ತಿ ಪ್ರಶಸ್ತಿಯು ಇದುವರೆಗೂ ಗಾಂಭೀರ್ಯವನ್ನು ಕಳೆದುಕೊಳ್ಳದೆ, ಅರ್ಹರಾದವರಿಗೆ ಮಾತ್ರ ದೊರೆತು ತನ್ನ ಘನತೆಯನ್ನು ಉಳಿಸಿಕೊಂಡಿದೆ’ ಎಂದು ಮೆಚ್ಚುಗೆ ಸೂಚಿಸಿದರು.
‘ಮಾಸ್ತಿ ಅವರು ಬದುಕಿನ ಸೂಕ್ಷ್ಮ ವಿಷಯಗಳನ್ನೇ ಗ್ರಹಿಸಿ ಸಾಹಿತ್ಯವನ್ನು ರಚನೆ ಮಾಡಿದರು. ಅವರು ಬರೆದ ಸಣ್ಣ ಕಥೆಗಳನ್ನು ಓದುತ್ತಿದ್ದರೆ, ಅವರೇ ಕಥೆಗಳನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ. ಅವರ ಸಣ್ಣ ಕಥೆಗಳನ್ನು ಓದುವಾಗ ಆಪ್ತ ಭಾವ ಮೂಡುತ್ತದೆ’ ಎಂದರು.
ಸಾಹಿತಿ ಕೆ.ವಿ.ಅಕ್ಷರ, ‘ಮಾಸ್ತಿ ಮತ್ತು ಅವರ ಕಾಲದಲ್ಲಿನ ಲೇಖಕರನ್ನು ಮತ್ತೊಮ್ಮೆ ಓದಿಕೊಂಡು, ಅರ್ಥ ಮಾಡಿಕೊಂಡು ಇಂದಿನ ಸಾಂಸ್ಕೃತಿಕ ಬಿಕ್ಕಟ್ಟಿಗೆ ರೂಪಾಂತರ ಕಂಡುಹಿಡಿಯುವುದು ಇಂದು ಪ್ರಸ್ತುತವಾಗಿದೆ’ ಎಂದರು.ಸಾಹಿತಿಗಳಾದ ಎಸ್.ದಿವಾಕರ್, ಡಾ.ಕೆ.ಸತ್ಯನಾರಾಯಣ, ಬಿ.ಆರ್.ಲಕ್ಷ್ಮಣರಾವ್ ಅವರಿಗೆ ಮಾಸ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₨ 25,000 ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಥೆಗಾರ ವಿವೇಕ ಶಾನಭಾಗ ಅವರ ‘ಘಾಚರ್ ಘೋಚರ್’ ಕಥಾಸಂಕಲನಕ್ಕೆ ಮಾಸ್ತಿ ಕಥಾ ಪುರಸ್ಕಾರ ನೀಡಲಾಯಿತು. ಲೇಖಕರಿಗೆ ₨ 20,000 ಹಾಗೂ ಕಥಾ ಸಂಕಲನದ ಪ್ರಕಾಶಕ ಕೆ.ವಿ. ಅಕ್ಷರ ಅವರಿಗೆ ₨ 10,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.