ಬೆಂಗಳೂರು: ‘ಹಲವು ಪಠ್ಯಗಳನ್ನು ತನ್ನೊಳಗೆ ಹುದುಗಿಸಿಕೊಂಡಂತೆ ಒಂದರೊಳಗೆ ಹತ್ತನ್ನು ಅರಿಯಬಹುದಾದ ಸಮೃದ್ಧ ಬರವಣಿಗೆ ದಿವಾಕರ್ ಅವರದ್ದು. ರೂಪದಿಂದ ರೂಪಕ್ಕೆ ಚಲಿಸುತ್ತಾ ತಾವು ಹೇಳಬೇಕಾದ್ದನ್ನು ರೂಪಕಗಳಲ್ಲಿ ಕಟ್ಟಿಕೊಡುತ್ತಾರೆ’ ಎಂದು ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ವಿಶ್ಲೇಷಿಸಿದರು.
ಆಕೃತಿ ಪ್ರಕಾಶನವು ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್.ದಿವಾಕರ್ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ‘ವಿಶ್ವದ ನೂರೆಂಟು ಸಂಗತಿಗಳನ್ನು ಒಂದೇ ಪಾಕದಲ್ಲಿ ಬೆರೆಸಿ ಜನರ ತಿಳಿವಳಿಕೆಯನ್ನು ಹಿಗ್ಗಿಸುವ ಸಾಮಾಜಿಕ ಕರ್ತವ್ಯವನ್ನು ಲೇಖಕ ಎಸ್.ದಿವಾಕರ್ ಅವರು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದರು.
‘ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ಪುತಿನ ಅವರ ಅಮೂರ್ತತೆ ಮತ್ತು ಎ.ಎನ್.ಮೂರ್ತಿರಾವ್ ಅವರ ಲಾಲಿತ್ಯವನ್ನು ದಿವಾಕರ್ ಅವರ ಬರಹಗಳಲ್ಲಿ ಸವಿಯಬಹುದು. ತಮ್ಮ ವಿದ್ವತ್ತನ್ನು ಬಹುಶೃತರ ಜೊತೆ ಹಂಚಿಕೊಳ್ಳುವ ಸಾಮಾಜಿಕ ಕರ್ತವ್ಯವನ್ನು ತಮ್ಮ ಕತೆ, ಪ್ರಬಂಧ ಮತ್ತು ಅನುವಾದಗಳ ಮೂಲಕ ದಿವಾಕರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದರು.
ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್, ‘ದಂಗುಬಡಿಸುವಷ್ಟು ವೈವಿಧ್ಯತೆ ದಿವಾಕರ್ ಅವರ ಕಥೆಗಳಲ್ಲಿವೆ. ಇವರ ಕಥೆಗಳಿಂದ ಹೊಮ್ಮುವ ಧ್ವನಿ ತರಂಗಗಳು ಮಾನವ ಬದುಕಿನ ಒಳನೋಟವನ್ನು ಕೊಡುವ ಚಿರಂತನಗಳು. ಇವರ ಸಣ್ಣಕಥೆಗಳು ಸಂಕ್ಷಿಪ್ತತೆಯಿಂದಾಗಿಯೇ ವಿಶ್ವಾತ್ಮಕ ಮಾನವತಾವಾದದ ಪ್ರತಿಮೆಗಳಾಗಿವೆ’ ಎಂದು ಬಣ್ಣಿಸಿದರು.
ಲೇಖಕ ಎಸ್. ದಿವಾಕರ್, ‘ಯಾವ ಭ್ರಮೆಗಳನ್ನೂ ಇಟ್ಟುಕೊಳ್ಳಲಾಗದ ರೀತಿಯಲ್ಲಿ ನಮ್ಮ ಬದುಕುಗಳನ್ನು ರೂಪಿಸಿಕೊಂಡಿದ್ದೇವೆ. ಬೆಂಗಳೂರಿನ ಬದುಕಿಗೆ ಒಂದು ರೂಪಕವನ್ನು ಕೊಡಲು ಸಾಧ್ಯವಾಗದಷ್ಟು ಸಂಕೀರ್ಣವಾಗಿದೆ. ತನ್ನ ನಿಜವಾದ ಓದುಗ ಯಾರು ಎನ್ನುವುದೂ ಗೊತ್ತಿಲ್ಲದ ಸ್ಥಿತಿ ಲೇಖಕನದ್ದಾಗಿದೆ’ ಎಂದರು.
ಸಾಹಿತಿ ಚಂದ್ರಶೇಖರ ಕಂಬಾರ, ‘ಬಹುಪಾಲು ಮಂದಿ ನಿರ್ಲಕ್ಷಿಸಿದ ವಲಯದ ಜೀವನಾನುಭವವನ್ನು ರಾಮಾನುಜನ್ ಮತ್ತು ಎಸ್. ದಿವಾಕರ್ ಅವರು ಅದ್ಭುತವಾಗಿ ಕಟ್ಟಿಕೊಡುತ್ತಾರೆ’ ಎಂದು ಹೇಳಿದರು. ಬಿಡುಗಡೆಯಾದ ಕೃತಿಗಳು: ರೂಪರೂಪಗಳನು ದಾಟಿ, ಹಾರಿಕೊಂಡು ಹೋದವನು, ಈ ಊರಿನಲ್ಲಿ ಕಳ್ಳರೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.