ADVERTISEMENT

‘ವಿಕ್ಟೋರಿಯಾ’ದಲ್ಲಿ ಪುಸ್ತಕ ಮೇಳ

ಆರೋಗ್ಯ ರಕ್ಷಣೆ ಕುರಿತು ಜಾಗೃತಿಗೆ ವಿನೂತನ ಕ್ರಮ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2015, 19:30 IST
Last Updated 13 ಏಪ್ರಿಲ್ 2015, 19:30 IST

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲ­ಯವು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ನವಕರ್ನಾಟಕ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಆರೋಗ್ಯ ರಕ್ಷಣೆ ಬಗ್ಗೆ  ಜಾಗೃತಿ ಮೂಡಿಸಲು ಸೋಮ­ವಾರ  ವಿಕ್ಟೋರಿಯಾ ಆಸ್ಪತ್ರೆ­ಯಲ್ಲಿ  ಪುಸ್ತಕ ಮೇಳ ಆಯೋಜಿಸಿತ್ತು.

ವಾಣಿವಿಲಾಸ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಆಶಾ ಬೆನಕಪ್ಪ  ಅವರು ಪುಸ್ತಕ ಮೇಳಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಡಾ. ಆಶಾ ಬೆನಕಪ್ಪ ಅವರು, ‘ಬದಲಾದ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಕಾಯಿಲೆಗಳು ಜನರನ್ನು ಕಾಡುತ್ತಿವೆ’ ಎಂದರು.

ಮುಂದುವರೆದು ಮಾತನಾಡಿದ ಅವರು, ‘ಹೀಗಿರುವಾಗ ಜನರು ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಆರೋಗ್ಯ ​​ವಿಜ್ಞಾನ ಪುಸ್ತಕಗಳು ಸಹಕಾರಿಯಾಗಲಿವೆ’ ಎಂದು ಹೇಳಿದರು.

‘ಆರೋಗ್ಯ ವಿಜ್ಞಾನ ಪುಸ್ತಕಗಳಲ್ಲಿ ಕಾಯಿಲೆಗೆ ಕಾರಣ, ತೆಗೆದು ಕೊಳ್ಳಬೇ­ಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ಇರುತ್ತದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳ­ಬೇಕು’  ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ ಮಾತನಾಡಿ, ‘ಆಹಾರ ಸುರಕ್ಷತೆ ತೋಟದಿಂದ ತಾಟಿ­ನವರೆಗೆ’ ಇದು ವಿಶ್ವ ಆರೋಗ್ಯ ದಿನಾಚ­ರಣೆಯ ಈ ವರ್ಷದ ಘೋಷ ವಾಕ್ಯ­ವಾ­ಗಿದೆ. ಅದಕ್ಕೆ ಪೂರಕವಾಗಿ ಆಯೋ­ಜಿಸಿರುವ ಈ ಮೇಳದಿಂದ ಆಹಾರ ಪದ್ಧತಿ, ಯಾವ ಋತುವಿನಲ್ಲಿ ಯಾವ ಬಗೆಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಸಮಗ್ರ ಮಾಹಿತಿ ಪಡೆದು­ಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ಆರೋಗ್ಯ ಸಾಹಿತ್ಯದ ಮುಖಾಂತರ ಆರೋಗ್ಯ ರಕ್ಷಣೆ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿಕೊಡುವ ಉದ್ದೇಶ ದಿಂದ ಈ ಪುಸ್ತಕ ಮೇಳವನ್ನು  ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಕಾಯಿಲೆಯ ಮೂಲ, ಗುಣಲಕ್ಷಣ, ಔಷಧ ಬಳಕೆ ಸೇರಿದಂತೆ ನಾನಾ ಮಾಹಿತಿಗಳನ್ನೊಳಗೊಂಡ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಈ ಮೇಳದಲ್ಲಿ ಲಭ್ಯವಿದೆ’ ಎಂದು ವಸುಂಧರಾ ಭೂಪತಿ ಅವರು ಮಾಹಿತಿ ನೀಡಿದರು.

‘ಮುಂದಿನ ವಾರ  ಕೆಂಪೇಗೌಡ (ಕಿಮ್ಸ್) ಆಸ್ಪತ್ರೆ ಹಾಗೂ ನಂತರದಲ್ಲಿ  ಕೆ.ಸಿ. ಜನರಲ್ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪುಸ್ತಕ ಮೇಳ ನಡೆಯಲಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.