ADVERTISEMENT

₹ 21 ಲಕ್ಷ ವಂಚನೆ: ದಂಪತಿಯಿಂದ ದೂರು

ಬಂಡವಾಳ ಹೂಡಿದರೆ ಹೆಚ್ಚು ಲಾಭಾಂಶ ಕೊಡುವ ಆಮಿಷ

​ಪ್ರಜಾವಾಣಿ ವಾರ್ತೆ
Published 14 ಮೇ 2020, 20:00 IST
Last Updated 14 ಮೇ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬಂಡವಾಳ ಹೂಡಿದರೆ ಹೆಚ್ಚು ಲಾಭಾಂಶ ಕೊಡುವ ಆಮಿಷ ಒಡ್ಡಿ ಚೈನ್ ಲಿಂಕ್‌ ವ್ಯವಹಾರ ಮೂಲಕ ₹ 21 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿಯೊಂದರ ಮೂವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದಂಪತಿ ದೂರು ನೀಡಿದ್ದಾರೆ.

ಕೆಟಿಎಂಪಿ ಮಾರ್ಕೆಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿ ಆರಂಭಿಸಿ ವಂಚಿಸಿದ್ದಾರೆಂದು ಕರಿಬಸಪ್ಪ, ಬಸಮ್ಮ ಮತ್ತು ಚನ್ನಬಸವ ಎಂಬವರ ವಿರುದ್ಧ ಸ್ಥಳೀಯ ನಿವಾಸಿ ಸವಿತಾ ಮತ್ತು ಪತಿ ಮನೋಹರ್‌ ದೂರು ನೀಡಿದ್ದಾರೆ. ಈ ಮೂವರು, ತಮ್ಮ ಮೂಲಕ ಹಲವರಿಂದ ಹಣ ಸಂಗ್ರಹಿಸಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

‘ಸ್ನೇಹಿತ ರಾಕೇಶ್‌ ಮೂಲಕ ನನಗೆ ಕರಿಬಸಪ್ಪನ ಪರಿಚಯವಾಗಿತ್ತು. 2019ರ ಫೆಬ್ರುವರಿಯಲ್ಲಿ ಪತಿ ಜೊತೆ ಕಂಪನಿಯ ಕಚೇರಿಗೆ ನಾನು ಹೋಗಿದ್ದೆ. ₹ 7,500 ಹೂಡಿಕೆ ಮಾಡುವಂತೆ ತಿಳಿಸಿದ ಕರಿಬಸಪ್ಪ, ಇತರರಿಂದ ಅಷ್ಟೇ ಹಣ ಹೂಡಿಕೆ ಮಾಡಿಸಿದರೆ ಪ್ರತಿಯೊಬ್ಬರ ಮೊತ್ತದಿಂದ ತಲಾ ₹ 750 ನಮಗೆ ಕೊಡುವುದಾಗಿ ಭರವಸೆ ನೀಡಿದ್ದರು’

ADVERTISEMENT

‘ಆದರೆ, ಯಾರಿಂದಲೂ ನಾವು ಹಣ ಹೂಡುವಂತೆ ಮಾಡುವುದಿಲ್ಲ. ಬದಲಾಗಿ ನಾವೇ ಹೆಚ್ಚು ಮೊತ್ತ ಹೂಡಿಕೆ ಮಾಡುವುದಾಗಿ ಹೇಳಿದೆವು. ಅದರಂತೆ, ₹ 4.50 ಲಕ್ಷ ಆನ್‌ಲೈನ್‌ ಮೂಲಕ ಮತ್ತು ₹ 16.50 ಲಕ್ಷ ನಗದು ರೂಪದಲ್ಲಿ ನೀಡಿದ್ದೇವೆ. 21 ತಿಂಗಳಲ್ಲಿ ₹ 21 ಲಕ್ಷ ನೀಡುವುದಾಗಿ ಕರಿಬಸಪ್ಪ ಆಮಿಷ ಒಡ್ಡಿದ್ದರು. ಕೇವಲ ₹ 2 ಲಕ್ಷ ನೀಡಿದ್ದು, ಬಳಿಕ ಹಣ ಕೊಟ್ಟಿಲ್ಲ. ಹಣ ಮರಳಿಸುವಂತೆ ಹಲವು ಬಾರಿ ಕೇಳಿದಾಗ, ‘ನೀವು ಯಾರೆಂಬುದೇ ನಮಗೆ ಗೊತ್ತಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಸಿದ್ದಾರೆ’ ಎಂದೂ ದೂರಿನಲ್ಲಿ ದಂಪತಿ ಆರೋಪಿಸಿದ್ದಾರೆ.

‌‘ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ನೋಟಿಸ್‌ ನೀಡಲಾಗಿದೆ‘ ಎಂದು ತನಿಖಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.