ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಎಸ್‌ಟಿಪಿಗಳ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರದ ‘ಜಲ್ ಹಿ ಅಮೃತ್’ ಯೋಜನೆ ಶ್ಲಾಘಿಸಿದೆ. 23 ಎಸ್‌ಟಿಪಿಗಳಿಗೆ ಕ್ಲೀನ್ ವಾಟರ್ ಕ್ರೆಡಿಟ್ ಅಡಿಯಲ್ಲಿ ಐದು ಸ್ಟಾರ್ ರೇಟಿಂಗ್ ನೀಡಿದ್ದು ಪ್ರೋತ್ಸಾಹಧನವಾಗಿ ₹103 ಕೋಟಿ ಮಂಜೂರು ಮಾಡಿದೆ.
ನಗರದಲ್ಲಿ 1,450 ಎಂಎಲ್‌ಡಿ ನೀರನ್ನು ಸಂಸ್ಕರಿಸಲಾಗುತ್ತದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 34 ಎಸ್‌ಟಿಪಿಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವುದರಲ್ಲಿ ಏಷ್ಯಾದಲ್ಲೇ ನಗರ ಪ್ರಥಮ ಸ್ಥಾನದಲ್ಲಿದ್ದು, ನೀರನ್ನು ಕೆರೆಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ.
‘ಜಲ್ ಹಿ ಅಮೃತ್’ ಯೋಜನೆ ಅಡಿಯಲ್ಲಿ ದೇಶದ ನಗರಗಳಲ್ಲಿನ ಎಸ್‌ಟಿಪಿಗಳ ಗುಣಮಟ್ಟ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನೀರಿನ ಸಂಸ್ಕರಣೆಯನ್ನು ಮಾಡುವಂತಹ ಎಸ್‌ಟಿಪಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸುವುದು ನಮ್ಮ ಆದ್ಯತೆ. ಇದನ್ನ ಪುರಸ್ಕರಿಸಿ ಕೇಂದ್ರ ಸರ್ಕಾರದ ವತಿಯಿಂದ ಪ್ರೋತ್ಸಾಹ ದೊರೆತಿದೆ’ ಎಂದು ಶ್ಲಾಘಿಸಿದರು.
‘ಬೆಂಗಳೂರು ಜಲಮಂಡಳಿ ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಅಳವಡಿಸಿಕೊಂಡಿದೆ. ಗುಣಮಟ್ಟಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ 8 ತಿಂಗಳಿನಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೇವೆ. ಪ್ರೋತ್ಸಾಹ ಧನವನ್ನು ಈ ಎಸ್‌ಟಿಪಿಗಳನ್ನು ಇನ್ನಷ್ಟು ಆಧುನಿಕರಿಸಲು ಬಳಸಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.