ADVERTISEMENT

ಬೆಂಗಳೂರು ನಗರದಲ್ಲಿ 10 ಸಾವಿರ ರಸ್ತೆ ಗುಂಡಿ!

​ಪ್ರಜಾವಾಣಿ ವಾರ್ತೆ
Published 17 ಮೇ 2022, 16:23 IST
Last Updated 17 ಮೇ 2022, 16:23 IST
   

ಬೆಂಗಳೂರು: ‘ನಗರದಲ್ಲಿ 10,282 ರಸ್ತೆಗುಂಡಿಗಳು ಇರುವುದು ಸರ್ವೆಯಿಂದ ತಿಳಿದುಬಂದಿದೆ. ಇವುಗಳಲ್ಲಿ 218 ಗುಂಡಿಗಳ ಸಮಸ್ಯೆ ಬಗೆಹರಿಸಲು ದೀರ್ಘಕಾಲೀನ ಪರಿಹಾರ ಕ್ರಮಗಳ ಅಗತ್ಯವಿದೆ’ ಎಂದು ಬಿಬಿಎಂಪಿಯ ಯೋಜನಾ ವಿಭಾಗದ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ದೀರ್ಘಕಾಲೀನ ಪರಿಹಾರ ಕ್ರಮ ಕೈಗೊಳ್ಳಲು ಗುರುತಿಸಲಾದ ರಸ್ತೆಗುಂಡಿಗಳಿರುವಲ್ಲಿ ಡಾಂಬರು ಹಾಕಿದರೂ ಅದು ಕಿತ್ತುಹೋಗುವ ಸಾಧ್ಯತೆ ಇದೆ. ಅಂತಹ ಕಡೆ ಕಾಂಕ್ರೀಟೀಕರಣ ನಡೆಸಬೇಕಾಗುತ್ತದೆ’ ಎಂದರು.

‘ಎಂಜಿನಿಯರ್‌ಗಳಿಂದ ಬರುವ ಬೇಡಿಕೆ ಆಧರಿಸಿ ಪಾಲಿಕೆಯ ಬಿಸಿ ಡಾಂಬರು ಮಿಶ್ರ ಮಾಡುವ ಘಟಕದಿಂದ ಡಾಂಬರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಳೀಯ ಸಹಾಯಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜೊತೆ ಮುಚ್ಚಿರುವ ರಸ್ತೆಗುಂಡಿಗಳನ್ನು ಆಯಾ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳೂ ಪರಿಶೀಲಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ಪಡೆಯಲು ಬಿಬಿಎಂಪಿ ರೂಪಿಸಿರುವ ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಸಾರ್ವಜನಿಕರೂ ಈ ಆ್ಯಪ್‌ ಮೂಲಕ ಗುಂಡಿಗಳ ವಿವರ ಕಳುಹಿಸಬಹುದು. ಅವುಗಳನ್ನು ಮುಚ್ಚುವುದಕ್ಕೆ ತಕ್ಷಣವೇ ಕ್ರಮಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.