ADVERTISEMENT

ಬಿಜೆಪಿ ಸರ್ಕಾರ ಘೋಷಿಸಿದ್ದ 11 ನಿಗಮಗಳ ನೋಂದಣಿಯೇ ಆಗಿಲ್ಲ: ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 15:56 IST
Last Updated 6 ಡಿಸೆಂಬರ್ 2023, 15:56 IST
ಶಿವರಾಜ ಎಸ್. ತಂಗಡಗಿ
ಶಿವರಾಜ ಎಸ್. ತಂಗಡಗಿ   

ವಿಧಾನಸಭೆ: ಹಿಂದಿನ ಸರ್ಕಾರ ಘೋಷಿಸಿದ್ದ 11 ನಿಗಮಗಳ ನೋಂದಣಿಯೇ ಆಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಾಂಗ್ರೆಸ್‌ನ ಸಿ.ಎಸ್‌. ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ಧೀರಜ್‌ ಮುನಿರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಹಿಂದಿನ ಸರ್ಕಾರ ಹೋದಲ್ಲಿ, ಬಂದಲ್ಲಿ ನಿಗಮಗಳ ಘೋಷಣೆ ಮಾಡಿತ್ತು. ನೋಂದಣಿ, ಅನುದಾನ ನಿಗದಿಗೆ ಕ್ರಮ ಕೈಗೊಂಡಿರಲಿಲ್ಲ. ಈಗ ನಿಗಮಗಳ ನೋಂದಣಿ ಆರಂಭಿಸಿದ್ದು, ಅನುದಾನವನ್ನೂ ಒದಗಿಸಲಾಗುತ್ತಿದೆ’ ಎಂದರು.

‘ಮರಾಠಾ ಅಭಿವೃದ್ಧಿ ನಿಗಮದ ನೋಂದಣಿಯೇ ಆಗಿಲ್ಲ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನೇ ನೀಡಿಲ್ಲ. ಸಣ್ಣ ಸಮುದಾಯಗಳಿಗೆ ನೆರವಿಗೆ ನಿಲ್ಲದಿದ್ದರೆ ಹೇಗೆ’ ಎಂದು ಪುಟ್ಟರಂಗ ಶೆಟ್ಟಿ ಕೇಳಿದರು.

ADVERTISEMENT

‘ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ತಾಲ್ಲೂಕಿಗೆ ಒಂದು ಕೊಳವೆಬಾವಿ ನೀಡಲಾಗುತ್ತಿದೆ. ಹಂಚಿಕೆ ಮಾಡುವುದು ಹೇಗೆ’ ಎಂದು ಧೀರಜ್‌ ಪ್ರಶ್ನಿಸಿದರು.

15 ಸಾವಿರ ಕೊಳವೆ ಬಾವಿ: ನಾಲ್ಕು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದ ಪ್ರಗತಿ ಕುಂಠಿತವಾಗಿದೆ. ಬಾಕಿ ಇರುವ 15,000 ಕೊಳವೆಬಾವಿಗಳನ್ನು 2024ರ ಮಾರ್ಚ್‌ ಅಂತ್ಯದೊಳಗೆ ಕೊರೆಯಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.